

ಕಲಬುರಗಿ: ಕಳೆದ ಕೆಲವು ದಿನಗಳಿಂದ ವಿವಾದಾತ್ಮಕ ಹೇಳಿಕೆಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಿಂದೂಗಳ ತೀವ್ರ ವಿರೋಧಕ್ಕೆ ಒಳಗಾಗಿ ಟ್ರೋಲ್ಗೀಡಾಗಿರುವ ನಟ ಪ್ರಕಾಶ್ ರಾಜ್ ಇಂದು ನೇರಾನೇರ ವಿರೋಧ ಧಿಕ್ಕಾರ ಎದುರಿಸುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಕಲಬುರಗಿಯ ರಂಗಮಂದಿರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಕಾಶ್ ರಾಜ್ ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಲಬುರಗಿ ನಗರದ ಜಗತ್ ವೃತ್ತದ ಬಳಿ ಹಿಂದು ಜಾಗೃತಿ ಸಂಘಟನೆಯಿಂದ ಪ್ರಕಾಶ್ ರಾಜ್ ವಿರುದ್ಧ ತೀವ್ರ ಪ್ರತಿಭಟನೆ ನಡೆಯಿತು.
ಕೈಯಲ್ಲಿ ಕಪ್ಪುಪಟ್ಟಿ ಹಿಡಿದು ಜಮಾಯಿಸಿದ ಹಿಂದೂಪರ ಸಂಘಟನೆಗಳ ಸದಸ್ಯರು, ಧರ್ಮದ್ರೋಹಿ, ಹಿಂದೂವಿರೋಧಿ ಪ್ರಕಾಶ್ ರಾಜ್ಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಸನಾತನ ಧರ್ಮಕ್ಕೆ ಜಯವಾಗಲಿ ಅಂತ ಜೈಕಾರವನ್ನೂ ಕೂಗಿದರು.
ಶಾಂತಿಯುತ ಕಲಬುರಗಿಯನ್ನ ಹಾಳು ಮಾಡಲು ಆಗಮಿಸಿದ ಪ್ರಕಾಶ್ ರಾಜ್ಗೆ ಧಿಕ್ಕಾರ ಎಂದ ಅವರು, ಪ್ರಕಾಶ್ ರಾಜ್ಗೆ ಎಚ್ಚರಿಕೆ ಎಚ್ಚರಿಕೆ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾನಿರತ ಹಿಂದು ಸಂಘಟನೆಯವರನ್ನು ಪೊಲೀಸರು ವಶಕ್ಕೆ ಪಡೆದರು.