

ಶಿವಮೊಗ್ಗ: ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ನಡೆಸಿರುವ ಈ ವರ್ಷದ ಸಿಇಟಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಮತ್ತು ಇತರೆ ವೃತ್ತಿಪರ ಸೀಟುಗಳನ್ನು ಅರ್ಹತೆ ಆಧಾರದಲ್ಲಿ ಹಂಚಿಕೆ ಮಾಡುವ ದೃಷ್ಟಿಯಿಂದ ಸಿಇಟಿ ನಡೆಸಲಾಗುತ್ತದೆ. ಆದೆ ಈ ವರ್ಷದ ಪರೀಕಷೆಯಲ್ಲಿ ಅನೇಕ ನ್ಯೂನ್ಯತೆಗಳು ಕಂಡು ಬಂದಿವೆ. ಸಿಇಟಿ ಬಗ್ಗೆ ವಿದ್ಯಾರ್ಥಿಗಳು ನಂಬಿಕೆ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರದ ನ್ಯೂನ್ಯತೆ ಮತ್ತು ಇಚ್ಛಾಶಕ್ತಿ ಕೊರತೆ ಇದರಲ್ಲಿ ಕಾಣುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೆಇಎಯಿಂದ ಹಲವಾರು ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಈಗ ಪರೀಕ್ಷೆಗಳ ಮೇಲೆ ಅಕ್ರಮದ ಕರಿನೆರಳು ಬಿದ್ದಿದೆ. ಒಂದು ಒಳ್ಳೆಯ ಸಂಸ್ಥೆಯನ್ನೇ ದಿಕ್ಕುತಪ್ಪಿಸುವ ಕೆಲಸ ನಡೆದಿದೆ. ಪ್ರಸ್ತುತ ವರ್ಷದ ಸಿಇಟಿ ಪರೀಕ್ಷೆಯಲ್ಲಿ ಪಠ್ಯದಲ್ಲಿ ಇಲ್ಲದ ಭೌತಶಾಸ್ತ್ರದ 10, ಗಣಿತದಲ್ಲಿ 14, ರಾಸಾಯನ ಶಾಸ್ತ್ರದ 23 ಹಾಗೂ ಜೀವಶಾಸ್ತ್ರದಲ್ಲಿ 12 ಪ್ರಶ್ನೆಗಳನ್ನು ಕೇಳಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಇದನ್ನು ಎಬಿವಿಪಿ ಖಂಡಿಸುತ್ತದೆ ಎಂದು ತಿಳಿಸಿದರು.
ಪಠ್ಯದಲ್ಲೇ ಇಲ್ಲದ ಪ್ರಶ್ನೆಗಳನ್ನು ಕೇಳಿರುವುದರಿಂದ ಸುಮಾರು ಮೂರು ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಸಮಸ್ಯೆ ಸೃಷ್ಟಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್, ಪ್ರಮುಖರಾದ ರವಿ, ಶರಣ್, ವರುಣ್, ಅಭಿಷೇಕ್, ಪುನೀತ್, ಕಾರ್ತಿಕ್, ಜೀವಿತ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.