ನಮ್ಮದು 140 ಪ್ಲಸ್​ ಮತ್ತು ಇತರೆ ಶಾಸಕ ಬೆಂಬಲಿತ ಸರ್ಕಾರ..ಇದನ್ನು ಬೀಳಿಸಲು ಸಾಧ್ಯವೇ?; DK Shivakumar

dk shivakunar
Published on

ಬಳ್ಳಾರಿ: ನಮ್ಮದು 140 ಪ್ಲಸ್​ ಮತ್ತು ಇತರೆ ಶಾಸಕ ಬೆಂಬಲಿತ ಸರ್ಕಾರ. ಇದನ್ನು ವಿರೋಧ ಪಕ್ಷಗಳು ಕಿತ್ತು ಹಾಕುತ್ತೇವೆ ಎಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಮ್ಮ ಬಲಿಷ್ಠವಾದ ಸರ್ಕಾರವನ್ನು ಬೀಳಿಸಲು ಸಾಧ್ಯವೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar)​ ಪ್ರಶ್ನಿಸಿದರು.

ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರನ್ನು ಗೆಲ್ಲಿಸಿದ್ದ ಹಿನ್ನೆಲೆಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಭಾನುವಾರ ಮಾತನಾಡಿದರು.

ಈ ಕ್ಷೇತ್ರದ ಜನ ನಿರಂತರವಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುತ್ತಾ ಬಂದಿದ್ದೀರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸೀಟು ಗೆಲ್ಲುತ್ತೇವೆ ಎಂದು ಹೇಳಿದಾಗ ಅನೇಕರು ನಕ್ಕರು. ಉಪಚುನಾವಣೆ ಪ್ರಚಾರಕ್ಕೆ ಬಂದಾಗಲೂ ನಮ್ಮ ಸಂಖ್ಯಾಬಲ 138ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದ್ದೆ. ಅದರಂತೆ ಅನ್ನಪೂರ್ಣ ಅವರ ಗೆಲುವಿನಿಂದ 138 ಸ್ಥಾನ ಬಂದಿದೆ.

ನಮ್ಮ ಪಕ್ಷದಿಂದ ಬಂಡಾಯ ಅಭ್ಯರ್ಥಿಯಾಗಿ ಗೆದ್ದ ಎಂ.ಪಿ ಪ್ರಕಾಶ್ ಅವರ ಪುತ್ರಿ ಹಾಗೂ ಗೌರಿಬಿದನೂರಿನ ಪುಟ್ಟಸ್ವಾಮಿ ಗೌಡರು ಸೇರಿದರೆ ನಮ್ಮ ಸಂಖ್ಯೆ 140 ಆಗುತ್ತದೆ. ಇದರ ಜತೆಗೆ ನಮ್ಮ ಬಿಜೆಪಿ ಸ್ನೇಹಿತರೂ ಇದ್ದಾರೆ.

140+ ಶಾಸಕರ ಬೆಂಬಲದ ಈ ಸರ್ಕಾರವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಸೇರಿ ಆರು ತಿಂಗಳಲ್ಲಿ ಕಿತ್ತುಹಾಕುವುದಾಗಿ ಹೇಳುತ್ತಾರೆ. ಇದು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ ಎಂದರು.

ಅನ್ನಪೂರ್ಣರ ಗೆಲುವು 2028ರ ಚುನಾವಣೆಗೆ ಮುನ್ನುಡಿ

ಅನ್ನಪೂರ್ಣ ಅವರನ್ನು ಗೆಲ್ಲಿಸುವ ಮೂಲಕ ಜನರು 2028ರ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆದಿದ್ದಾರೆ ಎಂದು ಡಿಸಿಎಂ ಡಿಕೆಶಿ ಹೇಳಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿ ರಾಜ್ಯಕ್ಕೆ ಸಂದೇಶ ರವಾನಿಸಿರುವ ಸಂಡೂರು ಮಹಾಜನತೆಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾವೆಲ್ಲರೂ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದರು.

ಅಧಿಕಾರ ನಶ್ವರ, ಕಾಂಗ್ರೆಸ್ ಸರ್ಕಾರದ ಸಾಧನೆಗಳು ಅಜರಾಮರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ ಎಂದು ಭಾವಿಸಿ ನಿಮಗೆ ನಮನ ಸಲ್ಲಿಸಲು ನಾನು, ಮುಖ್ಯಮಂತ್ರಿಗಳು ಹಾಗೂ ನಮ್ಮ ನಾಯಕರೆಲ್ಲರೂ ಬಹಳ ಸಂತೋಷದಿಂದ ಆಗಮಿಸಿದ್ದೇವೆ.

ಮಹಾತ್ಮಾ ಗಾಂಧೀಜಿ ಅವರು ಸಂಡೂರನ್ನು ಕರ್ನಾಟಕದ ಕಾಶ್ಮೀರ ಎಂದು ಕರೆದಿದ್ದರು. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನಡೆಸಿದ ಬೆಳಗಾವಿ ಅಧಿವೇಶನಕ್ಕೆ ಈಗ ಶತಮಾನೋತ್ಸವದ ಸಂಭ್ರಮ. ಗಾಂಧೀಜಿ ಅವರು ನೂರು ವರ್ಷಗಳ ಹಿಂದೆ ಸ್ವೀಕಾರ ಮಾಡಿದ ಸ್ಥಾನದಲ್ಲಿ ಇಂದು ಈ ಕಲ್ಯಾಣ ಕರ್ನಾಟಕ ಭಾಗದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಅವರ ಮಾರ್ಗದರ್ಶನದಂತೆ ನಾನು ಹಾಗೂ ಸಿದ್ದರಾಮಯ್ಯ ಅವರು ಶತಮಾನೋತ್ಸವ ಸಂಭ್ರಮವನ್ನು ಇಡೀ ವರ್ಷ ಆಚರಣೆ ಮಾಡಲು ಮುಂದಾಗಿದ್ದೇವೆ. ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net