ಪೌರಕಾರ್ಮಿಕರು ವೈದ್ಯರಿದ್ದಂತೆ

poura karmika
ಚಿಕ್ಕಮಗಳೂರಿನ ನಗರಸಭೆ ಆವರಣದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರು ಹಾಗೂ ಪೌರ ನೌಕರರನ್ನು ಸನ್ಮಾನಿಸಲಾಯಿತು. ಸಿ.ಎಸ್.ಮೀನಾ ನಾಗರಾಜ್, ಎಚ್.ಡಿ.ತಮ್ಮಯ್ಯ, ವರಸಿದ್ಧಿ ವೇಣುಗೋಪಾಲ್ ಇತರರಿದ್ದರು.
Published on

ಚಿಕ್ಕಮಗಳೂರು: ಪೌರಕಾರ್ಮಿಕರು ಸಮಾಜದ ಆರೋಗ್ಯ ಕಾಪಾಡುವ ವೈದ್ಯರಿದ್ದಂತೆ. ನಗರದ ಆರೋಗ್ಯ ಹಾಗೂ ಸ್ವಚ್ಛತೆ ಅಲ್ಲಿನ ಪೌರ ಕಾರ್ಮಿಕರ ಕೆಲಸದ ಮೇಲೆ ನಿಂತಿದೆ. ಹೀಗಾಗಿ ಪೌರಕಾರ್ಮಿಕರು ನಗರದ ಜೀವನಾಡಿಗಳು ಎಂದು ಜಿಲ್ಲಾಧಿಕಾರಿ ಸಿ.ಎಸ್.ಮೀನಾ ನಾಗರಾಜ್ ಹೇಳಿದರು.
ನಗರಸಭೆಯಲ್ಲಿ ಶನಿವಾರ ನಗರಸಭೆ, ರಾಜ್ಯ ಪೌರ ನೌಕರರ ಸಂಘದಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ನಗರದ ಸ್ವಚ್ಛತೆ ಕೇವಲ ಪೌರ ಕಾರ್ಮಿಕರ ಕೆಲಸವಲ್ಲ. ಜನರ ಮನಸ್ಥಿತಿಯೂ ಬದಲಾಗಬೇಕಿದೆ. ಜನ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿದಾಗ ಸ್ವಚ್ಛತೆ ಸುಲಭವಾಗುತ್ತದೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ಟೂರಿಸಂ ಹಬ್ ಆಗಿ ಬದಲಾಗುತ್ತಿದೆ. ಹಾಗಾಗಿ ನಾವು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಆದರೆ ಸ್ವಚ್ಛತೆ ವಿಷಯದಲ್ಲಿ ನಗರಕ್ಕೆ ದೇಶದಲ್ಲಿ ಒಳ್ಳೆಯ ಸ್ಥಾನವಿಲ್ಲ. ಇದನ್ನು ಮನಗಂಡು ನಗರವನ್ನು ಇನ್ನಷ್ಟು ಸ್ವಚ್ಛವನ್ನಾಗಿಸುವ ಕೆಲಸ ಮಾಡಬೇಕಿದೆ. ಇದಕ್ಕಾಗಿ ಪೌರ ಕಾರ್ಮಿಕರಿಗೆ ಎಲ್ಲ ರೀತಿ ಸಹಕಾರ ನೀಡಲಾಗುವುದು ಎಂದರು.
ಎಸ್ಪಿ ಡಾ. ವಿಕ್ರಮ ಅಮಟೆ ಮಾತನಾಡಿ, ಸ್ವಚ್ಛತೆಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಚಿಕ್ಕಮಗಳೂರು ಇತರ ನಗರಗಳಿಗೆ ಮಾದರಿಯಾಗಬೇಕು. ಇಲ್ಲಿನ ಗಿರಿ, ಶ್ರೇಣಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗುತ್ತಿದೆ. ಪ್ರವಾಸಿಗರು ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಗಿರಿಶ್ರೇಣಿಗಳಿಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಳಸಬಾರದು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನು ಪೌರಕಾರ್ಮಿಕರು ಸರಿಯಾಗಿ ಬಳಸಿಕೊಳ್ಳಬೇಕು. ನಗರಸಭೆಯಿಂದ ಪೌರ ಕಾರ್ಮಿಕರಿಗೆ ಎಲ್ಲ ರೀತಿಯ ಸೌಕರ್ಯ ನೀಡಲಾಗುತ್ತದೆ. ಬೆಳಗ್ಗೆ ಪೌರ ಕಾರ್ಮಿಕರಿಗೆ ಮೊಟ್ಟೆ ಸಹಿತ ಉತ್ತಮ ಉಪಾಹಾರ ನೀಡಲಾಗುತ್ತಿದೆ ಎಂದರು.
ತಾಲೂಕು ಕಚೇರಿಯಿಂದ ನಗರಸಭೆವರೆಗೆ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಪೌರ ಕಾರ್ಮಿಕರು ಹಾಗೂ ಪೌರ ನೌಕರರನ್ನು ಶಾಸಕ ಎಚ್.ಡಿ.ತಮ್ಮಯ್ಯ ಸನ್ಮಾನಿಸಿದರು.
ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಉಪಾಧ್ಯಕ್ಷ ಅಮೃತೇಶ್, ನಗರಾಭಿವೃದ್ಧಿಕೋಶದ ಅಧಿಕಾರಿ ನಾಗರತ್ನಾ, ಪೌರ ಕಾರ್ಮಿಕರ ಸಂಘದ ಪ್ರಮುಖರಾದ ಸಿ.ಬಿ.ನಾಗರಾಜ್, ಶ್ರೀನಿವಾಸ್, ನಗರಸಭೆ ಸದಸ್ಯರಾದ ಇಂದಿರಾ, ಕವಿತಾ ಶೇಖರ್, ಅರುಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net