

ಶಿವಮೊಗ್ಗ: ಭಾರತದ ಚರಿತ್ರೆ ಬದಲಾಗುವುದು ಮಠ ಮಂದಿರಗಳಿಂದಲ್ಲ, ಚುನಾವಣೆ ಸಂದರ್ಭಗಳಲ್ಲಿ ನಾವು ಹಾಕುವ ಮತಗಳಿಂದ ಎಂದು ಮೈಸೂರಿನ ಉರಿಲಿಂಗಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಹಿಂದುಳಿದ ಜನ ಜಾಗೃತಿ ವೇದಿಕೆಯಿಂದ ಕಾಂತರಾಜ ಆಯೋಗದ ವರದಿ ವಿರೋಧಿಗಳನ್ನು ಚುನಾವಣೆಯಲ್ಲಿ ಸೋಲಿಸಿ, ಸೀದಾ ಮನೆಗೆ ಕಳುಹಿಸಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮ ಮತ ನಮ್ಮ ಹಿತ ಕಾಯುವವರಿಗೆ ಹಾಕಬೇಕು. ನಮ್ಮ ಹಿತ ಕಾಯುವವರನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಸಂವಿಧಾನದ ಆಶಯಗಳನ್ನು ಉಳಿಸಲು ಸಾಧ್ಯ ಎಂದರು.
ಕಾಂತರಾಜ ಆಯೋಗದ ವಸ್ತುನಿಷ್ಠ ವರದಿಯನ್ನು ಜಾರಿ ಮಾಡಬೇಕಿದೆ. ಸಮುದಾಯದ ಪರವಾಗಿ ನಿಲ್ಲುವ ನಾಯಕತ್ವ ಬೇಕಿದೆ. ಆದರೆ ನಾವಿನ್ನೂ ಮೇಲ್ವರ್ಗದ ನಾಯಕರಿಗೆ ಸೆಲ್ಯುಟ್ ಮಾಡುತ್ತಿದ್ದೇವೆ. ಎಸ್ಸಿ, ಎಸ್ಟಿ ಸೇರಿ ಹಿಂದುಳಿದ ವರ್ಗದವರು ಸಂವಿಧಾನ ಆಶಯಗಳನ್ನು ಅರಿಯದೇ ಇರುವ ಕಾರಣಕ್ಕೆ ಕಾಂತರಾಜ ಆಯೋಗದ ವರದಿ ಇನ್ನೂ ಜಾರಿಯಾಗಿಲ್ಲ ಎಂದು ಹೇಳಿದರು.
ಎಸ್ಸಿ, ಎಸ್ಟಿ ಮತ್ತು ಹಿಂದುಳಿದವರು ಸಂವಿಧಾನದ ಪ್ರಜ್ಞೆ ಇಲ್ಲದೆ ಗುಲಾಮರು, ಜೀತದಾಳುಗಳಾಗಿದ್ದು ಹಿಂದುಳಿದ ವರ್ಗಕ್ಕೆ ಅಂಬೇಡ್ಕರ್ ಅವರು ಕಾಂಕ್ರೀಟ್ ಆಗಿ ಎಂದಿದ್ದರು. ದೇಶದ ಶೋಷಿತ, ಹಿಂದುಳಿದ ಜನಾಂಗ ಕಾಂಕ್ರೀಟ್ ಆಗಬೇಕು, ಗಟ್ಟಿಗೊಳ್ಳಬೇಕು ಎಂದಿದ್ದರು. ರಾಜಕೀಯ ಸ್ಥಾನಮಾನಕ್ಕಾಗಿ ಒಂದಾಗಬೇಕೆಂದು ಕರೆ ನೀಡಿದ್ದರು. ಹಿಂದುಳಿದವರು ಒಂದಾಗಿದ್ದರೆ ಬೂಟಿನ ಲೇಸ್ ಅನ್ನೂ ಕಟ್ಟಲು ಬರುತ್ತಾರೆ ಎಂದು ಹೇಳಿದ್ದರು. ಆದರೆ ಇಂದಿನ ವ್ಯವಸ್ಥೆ ಮನುವಾದಿಗಳನ್ನು ಯಾವುದೇ ಕಾರಣಕ್ಕೂ ಒಂದಾಗದ ರೀತಿಯಲ್ಲಿ ಮಾಡಿದೆ. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳದಿರುವುದೇ ಹಿಂದುಳಿದವರು ಗುಲಾಮರಾಗಿ ಬದುಕುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಕ್ಕು ಮತ್ತು ಅಧಿಕಾರ ಮೇಲ್ವರ್ಗದ ಬಳಿ ಇರುತ್ತವೆ. ಅವು ಇಲ್ಲದ ಹಿಂದುಳಿದ ವರ್ಗದ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಹಿಂದುಳಿದವರ ಮೆದುಳಿಗೆ ಬೇಲಿ ಹಾಕಿದ್ದು ಅದನ್ನು ಕಳಚಲು ಅಂಬೇಡ್ಕರ್ ಮತ್ತು ಬಸವಣ್ಣ ಅವರೇ ಬರಬೇಕಿದೆ. ಪ್ರಸ್ತುತ ರಾಜ್ಯದ ಸಂಪತ್ತು ಎರಡು ಪ್ರಬಲ ಜಾತಿಗಳ ಕೈಯಲ್ಲಿದ್ದು ಹಿಂದುಳಿದ ವರ್ಗದವರು ಭಯ, ಮನುಸ್ಮತಿಯನ್ನು ತಲೆಯಿಂದ ಕಿತ್ತು ಹಾಕದೇ ಹೋದರೆ ಅಂಬೇಡ್ಕರ್ ಕೊಟ್ಟ ಸಂವಿಧಾನಕ್ಕೆ ಉಳಿಗಾಲವಿಲ್ಲ ಎಂದರು.
ಮೈಸೂರಿನ ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ಆರ್.ಮಹಾದೇವಪ್ಪ, ಚಿಂತಕ ರಾಜಪ್ಪ ಮಾಸ್ತರ್, ವೇದಿಕೆ ಗೌರವಾಧ್ಯಕ್ಷ ಪ್ರೊ. ಎಚ್.ರಾಚಪ್ಪ, ಸಂಚಾಲಕ ತೀ.ನ.ಶ್ರೀನಿವಾಸ್ ಉಪಸ್ಥಿತರಿದ್ದರು.