ಡಿ.10ರವರೆಗೆ ನಮ್ಮ ಶೌಚಗೃಹ-ನಮ್ಮ ಗೌರವ: ಸಿಇಒ

ceo
ನಮ್ಮ ಶೌಚಗೃಹ-ನಮ್ಮ ಗೌರವ ವಿಶೇಷ ಆಂದೋಲನದ ಪೋಸ್ಟರ್‌ನ್ನು ಎನ್.ಹೇಮಂತ್ ಬಿಡುಗಡೆ ಮಾಡಿದರು. ಕೆ.ಆರ್.ಸುಜಾತಾ, ಅವಿನಾಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ವಿಶ್ವ ಶೌಚಗೃಹ ದಿನದ ಅಂಗವಾಗಿ ನ.19 ರಿಂದ ಡಿ.10ರವರೆಗೆ ಜಿಲ್ಲೆಯಾದ್ಯಂತ ನಮ್ಮ ಶೌಚಗೃಹ-ನಮ್ಮ ಗೌರವ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಈ ಆಂದೋಲನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.

ಮಂಗಳವಾರ ಆಂದೋಲನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವೈಯಕ್ತಿಕ ಶೌಚಗೃಹ ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವ ಮೂಲಕ ಶೀಘ್ರವಾಗಿ ಶೌಚಗೃಹ ನಿರ್ಮಾಣ ಮಾಡಿಕೊಳ್ಳುವಂತೆ ಸೂಚಿಸಿದರು.

ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ, ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಿ ಶೌಚಗೃಹ ಬಳಸಲು ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನ.19ರಂದು ವಿಶ್ವ ಶೌಚಗೃಹ ದಿನ ಆಚರಿಸಲಾಗುತ್ತಿದೆ. ವಿಶೇಷ ಆಂದೋಲನದ ಮೂಲಕ ಗ್ರಾಪಂ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಶೌಚಗೃಹ ಬಳಕೆ ಕುರಿತು ಸಮೀಕ್ಷೆ ನಡೆಸಲಾಗುವುದು. ನಿರಂತರವಾಗಿ ಶೌಚಗೃಹ ಬಳಸುವ ಫಲಾನುಭವಿಗಳನ್ನು ಗುರುತಿಸಿ ಬಹುಮಾನ ನೀಡಲಾಗುವುದು. ಅತ್ಯುತ್ತಮ ವೈಯಕ್ತಿಕ ಶೌಚಗೃಹ ಗುರುತಿಸಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಪ್ರಥಮ ಸಾವಿರ ರೂ., ದ್ವಿತೀಯ 6, ತೃತೀಯ 5, ನಾಲ್ಕನೇ ಬಹುಮಾನ ಮೂರು ಸಾವಿರ ಹಾಗೂ 5ನೇ ಬಹುಮಾನವಾಗಿ ಎರಡು ಸಾವಿರ ರೂ. ನಗದು ನೀಡಲಾಗುವುದು. ತಾಲೂಕು ಮಟ್ಟದಲ್ಲಿ ಪ್ರಥಮ ಐದು ಸಾವಿರ ರೂ., ದ್ವಿತೀಯ ಮೂರು ಹಾಗೂ ತೃತೀಯ ಎರಡು ಸಾವಿರ ರೂ. ನಗದು ನೀಡಲಾಗುವುದು ಎಂದು ತಿಳಿಸಿದರು.

ಜಿಪಂ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ, ಶಿವಮೊಗ್ಗ ತಾಪಂ ಕಾರ್ಯನಿರ್ವಹಣಾಧಿಕಾರಿ ಅವಿನಾಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net