

ಬೆಂಗಳೂರು: ಬರ ಪರಿಹಾರದ ಹಣ ಬಿಡುಗಡೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು ರಾಜಕೀಯ ಸ್ಟಂಟ್. ಈ ರೀತಿಯ ರಾಜಕೀಯ ಸ್ಟಂಟ್ ಬಿಟ್ಟು ಸಿದ್ದರಾಮಯ್ಯ ಕೆಲಸ ಮಾಡಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿಗೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ತೆರಿಗೆ ನಮ್ಮ ಹಣ ಎನ್ನುವುದು ರಾಜಕೀಯ ಡ್ರಾಮಾ. ಸರ್ಕಾರ ಇಂಥ ಡ್ರಾಮಾ ಬಿಟ್ಟು ಕೆಲಸ ಮಾಡಬೇಕು ಎಂದು ಹೇಳಿದರು.
ತಮ್ಮ ಶಸ ಚಿಕಿತ್ಸೆ ಬಗ್ಗೆ ಮಾತನಾಡಿ, ಇದೊಂದು ಪುನರ್ಜನ್ಮ ಎಂದೇ ಹೇಳಬಹುದು. ನಾಡಿನಾದ್ಯಂತ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದರು. ಅಭಿಮಾನಿಗಳು, ಹಿತೈಷಿಗಳ ಪ್ರಾರ್ಥನೆ ಫಲ ಕೊಟ್ಟಿದೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಮಾಡುತ್ತೇನೆ ಎಂದು ಹೇಳಿದರು.
ಎರಡು ಬಾರಿ ಶಸ ಚಿಕಿತ್ಸೆಯಲ್ಲಿ ಲೋಪದೋಷ ಆಗಿತ್ತು. ಭಗವಂತ ಕಾಪಾಡಿದ್ದಾನೆ. ಮೂರನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ. ಮನುಷ್ಯ ಹಲವಾರು ರೀತಿ ತಾಂತ್ರಿಕವಾಗಿ ಮುಂದುವರೆದಿದ್ದಾನೆ. ವೈದ್ಯರು ಸಾಯಿಬಾಬಾ ಭಕ್ತರು. ಸಾಯಿಬಾಬನಿಗೆ ಪೂಜೆ ಸಲ್ಲಿಸಿ ಬಂದು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಮತ್ತೊರ್ವ ವೈದ್ಯ ಹಂಗೇರಿಯಾದವರು ನನಗೆ ಮರುಜನ್ಮ ನೀಡಿದ್ದಾರೆ. ನನ್ನ ಕೈಲಾದ ರೀತಿ ಚುನಾವಣೆ ಪ್ರಚಾರದಲ್ಲಿ ತೊಡಗುತ್ತೇನೆ. ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆಯುತ್ತೇನೆ. ಮಂಡ್ಯ ಅಭ್ಯರ್ಥಿ ಸೋಮವಾರ ಅಂತಿಮವಾಗಲಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.