

ನವದೆಹಲಿ: ಕರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್ಡೌನ್ ಸಮಯದಲ್ಲಿ ಸಾರ್ವಜನಿಕರು ತೋರಿಸುತ್ತಿರುವ ಪ್ರಬುದ್ಧತೆ ಮತ್ತು ಗಂಭೀರತೆ ಅಭೂತಪೂರ್ವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಭಾರತೀಯ ಜನತಾ ಪಕ್ಷದ 40ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಪಕ್ಷದ ಕಾರ್ಯಕರ್ತರು ಹಾಗೂ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶಾದ್ಯಂತ ಎಲ್ಲ ಜನರು ಭಾನುವಾರ ರಾತ್ರಿ 9ಗಂಟೆಗೆ ಲೈಟ್ಗಳನ್ನು ಆರಿಸಿ ತಂತಮ್ಮ ಮನೆಗಳು ಮತ್ತು ಬಾಲ್ಕನಿಯಲ್ಲಿ ದೀಪ ಹಾಗೂ ಕ್ಯಾಂಡಲ್ಗಳನ್ನು ಬೆಳಗುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ದೇಶದ ಏಕತೆಯನ್ನು ತೋರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದರು. ಕರೊನಾ ವಿರುದ್ಧದ ಹೋರಾಟ ಯುದ್ಧಕ್ಕಿಂತ ಕಡಿಮೆಯಲ್ಲ, ಇದು ದೀರ್ಘಾವಧಿ ಪಯಣ. ಇದರಲ್ಲಿ ನಾವು ಆಯಾಸ ಮಾಡಿಕೊಳ್ಳದೆ, ಜಯಶಾಲಿಯಾಗುವುದು ನಮ್ಮ ಸಂಕಲ್ಪ ಎಂದರು.
ಬಿಜೆಪಿಗೆ ರಕ್ತ ಮತ್ತು ಬೆವರಿನಿಂದ ನೀರುಣಿಸಿ ಬೆಳೆಸಿದ ಎಲ್ಲರಿಗೂ ಗೌರವ ಅರ್ಪಿಸುತ್ತೇನೆ. ಅವರ ಕಾರಣದಿಂದಾಗಿ ಇಂದು ಕೋಟ್ಯಂತರ ಭಾರತೀಯರಿಗೆ ಸೇವೆ ಸಲ್ಲಿಸಲು ಬಿಜೆಪಿಗೆ ಅವಕಾಶ ಸಿಕ್ಕಿದೆ. ಪಕ್ಷದ ತತ್ವ-ಸಿದ್ಧಾಂತಗಳಿಗೆ ಅನುಗುಣವಾಗಿ ನಮ್ಮ ಕಾರ್ಯಕರ್ತರು ದೇಶದ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ ಹಾಗೂ ಸಾಮಾಜಿಕ ಬದಲಾವಣೆಯ ಹೊಸ ಉದಾಹರಣೆಗಳನ್ನು ನೀಡಿದ್ದಾರೆ ಎಂದು ಮೋದಿ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ದೇಶಾದ್ಯಂತ ಬಿಜೆಪಿಯ ಕಚೇರಿಗಳ ಮೇಲೆ ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮೇಲೆ ಪಕ್ಷದ ಬಾವುಟ ಹಾರಿಸಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಿದ್ದಾರೆ.