

ಊರ ನ್ಯಾಯ ಪಂಚಾಯಿತಿ, ವಾರ್ಷಿಕ ನಾಟಕ, ನೃತ್ಯ, ಮದುವೆ ಮುಂಜಿ, ಹಾಡುಗಾರಿಕೆ- ಎಲ್ಲವೂ ನಡೆಯುತ್ತಿದ್ದದ್ದೇ ದೇಗುಲದ ಪ್ರಾಂಗಣದಲ್ಲಿ. ಹಾಗಾಗಿ ಅವು ಭಾರತದ ಪುರಾತನ ಸಂಸ್ಕೃತಿಯ ಆಧಾರ ಸ್ತಂಭಗಳು ಮತ್ತು ಸಂಸ್ಕೃತಿ ವಾಹಕಗಳು. ದೇವರುಗಳ ಹೆಸರು ಬೇರೆ ಬೇರೆಯಾದರೂ ಅವುಗಳ ಗುರಿ, ಸಂದೇಶ ಮತ್ತು ಪರಿಣಾಮ ಒಂದೇ ಆಗಿರುತ್ತಿದ್ದವು. ಆ ವಿಚಾರದಲ್ಲಿ ಅಲ್ಲಿಂದ ಇಲ್ಲಿಯವರೆಗೆ ಪರಿಣಾಮದಲ್ಲಿ ಒಂದಿನಿತೂ ವ್ಯತ್ಯಾಸ ಅಗಿಲ್ಲ ಎಂಬುದನ್ನು ಗಮನಿಸಬೇಕು. ಅದಕ್ಕೆ ಬ್ರಿಟಿಷ್ ಕಾಲದ ಒಂದು ಉತ್ತಮವಾದ ಐತಿಹಾಸಿಕ ನಿದರ್ಶನವಿದೆ. ಉದಾಹರಣೆಗೆ, ಭಾರತದಲ್ಲಿ ವೇಗವಾಗಿ ಪಸರಿಸುತ್ತಿರುವ ಸ್ವಾತಂತ್ರ್ಯದ ಕಿಚ್ಚನ್ನು ಕಂಡು ಕಂಗಾಲಾದ ಬ್ರಿಟಿಷ್ ಸರ್ಕಾರ ಭಾರತೀಯರ ಮನ ಗೆಲ್ಲಲು ಅಥವಾ ಬ್ರಿಟಿಷ್ ಅಧಿಕಾರಶಾಹಿಯನ್ನು ಮುಂದುವರಿಸಲು ಏನು ಮಾಡಬೇಕೆಂಬುದನ್ನು ಅಧ್ಯಯನ ಮಾಡುವುದಕ್ಕೆ ಲಾರ್ಡ್ ಮೆಕಾಲೆ ನೇತೃತ್ವದಲ್ಲಿ ಸಮಿತಿಯೊಂದನ್ನು 1835ರಲ್ಲಿ ರಚಿಸಿತು. ಆ ಕಮಿಟಿ ಬ್ರಿಟಿಷ್ ಸರ್ಕಾರಕ್ಕೆ ವಿಸõತವಾದ ಅಧ್ಯಯನ ವರದಿ ನೀಡಿತು. ಆ ವರದಿಯ ಕೆಲವು ಮುಖ್ಯಾಂಶಗಳನ್ನು ಮಾತ್ರ ಇಲ್ಲಿ ನಾನು ಉಲ್ಲೇಖ ಮಾಡುತ್ತೇನೆ.
‘ಭಾರತೀಯರಲ್ಲಿ ಆಳವಾಗಿ ಬೇರೂರಿರುವ ಧಾರ್ವಿುಕ, ಸಾಂಸ್ಕೃತಿಕ ಭಾವನೆಯನ್ನು ದುರ್ಬಲಗೊಳಿಸದೆ ಬ್ರಿಟಿಷ್ ಆಧಿಪತ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ನಂಬಿಕೆಯೇ ಭಾರತೀಯರ ಜೀವಾಳ. ಅದಕ್ಕೋಸ್ಕರ ಬ್ರಿಟಿಷ್ ಸರ್ಕಾರ ಸಾಂಸ್ಕೃತಿಕ, ಪಾರಂಪರಿಕ ಸಂಸ್ಥೆಗಳಿಗೆ ಅನುದಾನ ನೀಡಿಕೆಯನ್ನು ಸ್ಥಗಿತಗೊಳಿಸಬೇಕು, ಭಾರತೀಯ ಮತ್ತು ಅರೇಬಿಕ್ ಭಾಷೆಗಳ ಬದಲಿಗೆ ಇಂಗ್ಲಿಷ್ ಶಿಕ್ಷಣವನ್ನು ಜನಪ್ರಿಯಗೊಳಿಸಬೇಕು’ ಎಂಬ ಸಲಹೆ ನೀಡಿತ್ತು. ಮೆಕಾಲೆ ಸಮಿತಿ ನೀಡಿದ ಆ ವರದಿಯನ್ನು ಬ್ರಿಟಿಷ್ ಸರ್ಕಾರ ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಿ ಅದರ ಜಾರಿಗೆ ಒಪ್ಪಿಗೆ ಪಡೆಯಿತು. ಆ ದಾಖಲೆ ಇಂದಿಗೂ ಅಧ್ಯಯನಕ್ಕೆ ಲಭ್ಯವಿದೆ. ಮೆಕಾಲೆ ಸಮಿತಿ ಶಿಫಾರಸಿನಂತೆಯೇ ಇಂಗ್ಲಿಷ್ ಶಿಕ್ಷಣವನ್ನು ಭಾರತದಲ್ಲಿ ಜನಪ್ರಿಯಗೊಳಿಸಲು ಬ್ರಿಟಿಷ್ ಸರ್ಕಾರವು ಅನೇಕ ಶೈಕ್ಷಣಿಕ ಯೋಜನೆಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿತು. ಅದರ ಭಾಗವಾಗಿ ಕ್ರೖೆಸ್ತ ಚರ್ಚುಗಳ ಕೇಂದ್ರಿತ ಶೈಕ್ಷಣಿಕ ಕೇಂದ್ರಗಳನ್ನು ತೆರೆಯಲು ದೇಶಾದ್ಯಂತ ಬ್ರಿಟಿಷ್ ಸರ್ಕಾರ ಎಲ್ಲ ರೀತಿಯ ಸಹಾಯ ಸಹಕಾರ ನೀಡಿತು. ಆ ವ್ಯವಸ್ಥೆಯಿಂದ ಒಂದು ಕಡೆ ಮತಾಂತರ ನಡೆದರೆ ಇಂಗ್ಲಿಷ್ ಶಿಕ್ಷಣದಿಂದ ನಿಷ್ಠಾಂತರ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿತು. ವಿಶೇಷ ಎಂದರೆ ಬ್ರಿಟಿಷರ ಆ ನೀತಿಯನ್ನು ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷ ಮತ್ತು ನೆಹರು ನೇತೃತ್ವದ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ಮುಂದುವರಿಸಿದವು.
ನೆಹರು ಶಿಕ್ಷಣ ನೀತಿ ಬ್ರಿಟಿಷ್ ಮತ್ತು ಎಡಪಂಥೀಯ ವಿಚಾರದ ಮಿಶ್ರಣವಾಗಿತ್ತು. ಆ ಶಿಕ್ಷಣ ನೀತಿಯ ಪರಿಣಾಮ ಭಾರತೀಯ ಶ್ರದ್ಧಾ ಕೇಂದ್ರಗಳನ್ನು, ಐತಿಹಾಸಿಕ ಯುದ್ಧಗಳನ್ನು, ಭಾರತೀಯ ರಾಜ ಮಹಾರಾಜರ ಶೌರ್ಯ ಮತ್ತು ಪರಾಕ್ರಮಗಳ ಪರಂಪರೆಯನ್ನು ಹಂತ ಹಂತವಾಗಿ ಗೌಣ ಮಾಡುತ್ತ ಬರಲಾಯಿತು. ಸ್ವಾತಂತ್ರ್ಯ ಹೋರಾಟವನ್ನು ನಿರ್ಣಾಯಕ ಘಟ್ಟಕ್ಕೆ ತರಲು ಪ್ರಮುಖ ಕಾರಣೀಕರ್ತರಾದ ಕ್ರಾಂತಿಕಾರಿಗಳನ್ನೂ ಗೌಣ ಮಾಡುವ ಪ್ರಯತ್ನ ಸರ್ಕಾರಿ ಪಠ್ಯಕ್ರಮದ ಮೂಲಕವೇ ನಡೆಯಿತು. ಎಷ್ಟು ಎಂದರೆ ಕೋಟ್ಯಂತರ ಭಾರತೀಯರಿಗೆ ನೈತಿಕ, ಆಧ್ಯಾತ್ಮಿಕ ಜೀವನಪಾಠ ಮಾಡಬಲ್ಲ ಅಯೋಧ್ಯೆ ನಮ್ಮನ್ನು ಆಳುವ ನಮ್ಮವರಿಗೇ ಒಂದು ಯಃಕಶ್ಚಿತ್ ದೇವಾಲಯವೆಂಬಂತೆ ತೋರಿತು. ಅಯೋಧ್ಯೆಯ ಪುನರುತ್ಥಾನಕ್ಕೆ ಒಟ್ಟು 500 ವರ್ಷ ವಿಳಂಬವಾದರೆ, ಈ ಪೈಕಿ ನಮ್ಮವರೇ 75 ವರ್ಷ ವಿಳಂಬ ಮಾಡಿದರು.
ಈ ಪರಂಪರೆ ಈಗಲೂ ಮುಂದುವರಿದಿದೆ. ಭಾರತೀಯ ದೇವಾಲಯಗಳ ಬಲಿ ಪರಂಪರೆಗೆ ವಿರೋಧ, ಜಾನಪದ ಸಂಸ್ಕೃತಿ ಮತ್ತು ಸಂಸ್ಕಾರದ ಟೀಕೆ, ವಿರೋಧ, ಕುಹಕ ಇವೆಲ್ಲ ಅದರ ಮುಂದುವರಿಕೆಯ ಭಾಗ. ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇವಾಲಯ, ಶಿರಡಿ ದೇವಾಲಯ, ಶಬರಿಮಲೈ ದೇವಾಲಯ ಇವೆಲ್ಲವೂ ದೇಶಾದ್ಯಂತ ಗಮನ ಸೆಳೆದ ವಿವಾದಗಳಾದವು. ಕಾರಣ ಇಲ್ಲಿ ಉಲ್ಲೇಖ ಮಾಡಿದ ಎಲ್ಲ ಶ್ರದ್ಧಾಕೇಂದ್ರಗಳು ಕೋಟ್ಯಂತರ ಜನರನ್ನು ಚುಂಬಕದಂತೆ ಸೆಳೆಯುತ್ತಿವೆ. ಏಕಸೂತ್ರದಲ್ಲಿ ಪೋಣಿಸುತ್ತಿವೆ. ಜಾತಿ- ಮತ- ಪಂಥ- ಭಾಷೆ ಭೇದಗಳಿಲ್ಲದೆ ಜನರನ್ನು ಒಂದುಗೂಡಿಸುತ್ತಿವೆ. ಶಿಕ್ಷಣದ ನಂತರ ದೇವಸ್ಥಾನಗಳೇ ಟಾರ್ಗೆಟ್ ಆಗಿವೆ. ಕಂಚಿ ಕಾಮಕೋಟಿ ಪೀಠದ ಈ ಹಿಂದಿನ ಗುರುಗಳನ್ನು ವಿನಾಕಾರಣ ವಿವಾದದಲ್ಲಿ ಸಿಲುಕಿಸಿ ಬಂಧಿಸಿದ ಇತಿಹಾಸ ಕಣ್ಣಮುಂದೆಯೇ ಇದೆ. ಅದೇ ರೀತಿ ಇನ್ನೂ ಅನೇಕ ಮಠ ಮಂದಿರಗಳನ್ನು, ಹಿಂದೂ ಧಾರ್ವಿುಕ ನಾಯಕರನ್ನು ವಿವಾದದ ಕೇಂದ್ರ ಮಾಡಿದ್ದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತಿ ಬಾರಿ ಹಿಂದೂ ಧರ್ಮ, ಧಾರ್ವಿುಕ ನಾಯಕರು, ಶ್ರದ್ಧಾ ಕೇಂದ್ರಗಳೇ ಏಕೆ ಟಾರ್ಗೆಟ್? ಇತರ ಮತಗಳು ಏಕಿಲ್ಲ? ಅಲ್ಲಿ ಯಾವುದೇ ವ್ಯವಹಾರ ವಿವಾದ ಏಕಾಗುತ್ತಿಲ್ಲ? ಅವರಲ್ಲಿ ಹುಳುಕುಗಳಿಲ್ಲವೇ? ಕಾರಣ, ಅವು ಇವರ ಅಜೆಂಡಾದ ಭಾಗವಲ್ಲ.
ಈಗ ಗಮನ ಸೆಳೆದಿರುವ ಧರ್ಮಸ್ಥಳದ ವಿಚಾರಕ್ಕೆ ಬರೋಣ. ಏಕಾಏಕಿ ಧರ್ಮಸ್ಥಳ ಏಕೆ ಟಾರ್ಗೆಟ್? ಈ ಹಿಂದೆಯೂ ಧರ್ಮಸ್ಥಳದ ವಿರುದ್ಧ ನಿರಂತರ ಅಪಪ್ರಚಾರ ನಡೆದೇ ಇತ್ತು. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಶ್ರೀ ಮಂಜುನಾಥ ದೇವಸ್ಥಾನದ ಪೂಜಾ ಕೈಂಕರ್ಯದ ಜೊತೆಜೊತೆಗೆ ಸಮಾಜವನ್ನು ಸಶಕ್ತಗೊಳಿಸುವ ವಿವಿಧ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಮಧ್ಯೆ ಹೋದಾಗ, ಜನರ ವಿಶ್ವಾಸ ಗಳಿಸಿದ ಮೇಲೆ ಮತ್ತು ಓರ್ವ ಸಾತ್ವಿಕ ಬಲಾಢ್ಯ ಧಾರ್ವಿುಕ ನಾಯಕ ರಾಷ್ಟ್ರೀಯ ವಿಚಾರ ಮತ್ತು ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತಾಗಲೇ ಈ ಕಿರುಕುಳ ಶುರುವಾಯಿತು. ಯಾವಾಗ ಡಾ. ಹೆಗ್ಗಡೆ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡರೋ ಆಗ ಈ ಅಪಪ್ರಚಾರ ಮತ್ತಷ್ಟು ವೇಗ ಪಡೆದುಕೊಂಡಿತು. ಅದೀಗ ವಿಕೋಪಕ್ಕೆ ತಿರುಗಿ ಷಡ್ಯಂತ್ರ ಹೆಣೆದವರು ದೇಶದ ಎದುರು ಬೆತ್ತಲಾಗಿದ್ದಾರೆ. ಇದು ಒಂದು ನಿಷ್ಕಾಮ ಸೇವೆ ಮತ್ತು ಹಿಂದೂ ಧರ್ಮದ ನಿಜವಾದ ತಾಕತ್ತು.
ಈ ಪಿಡುಗು ಇಲ್ಲಿಗೇ ನಿಲ್ಲುತ್ತದೆ ಎಂದು ಭಾವಿಸುವುದು ತಪ್ಪು. ಇದೊಂದು ದೀರ್ಘಕಾಲೀನ ಮತ್ತು ವ್ಯವಸ್ಥಿತ ಪಿತೂರಿಯ ಭಾಗ. ಇದರ ಹಿಂದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದುಷ್ಟ ಶಕ್ತಿಗಳ ಮಿಲಾಪಿಯೂ ಇದೆ. ಸದಾ ಎಚ್ಚರವಾಗಿರೋಣ!
ಮೂರು ಸಾಗರ, ನೂರು ಮಂದಿರ
ದೈವ ಸಾಸಿರವಿದ್ದರೆ,
ಸಿಂಧುವಿದ್ದರೆ, ಗಂಗೆಯಿದ್ದರೆ,
ಗಿರಿ ಹಿಮಾಲಯವಿದ್ದರೆ,
ವೇದವಿದ್ದರೆ, ಶಾಸ್ತ್ರವಿದ್ದರೆ,
ಘನ ಪರಂಪರೆ ಇದ್ದರೆ,
ಏನು ಸಾರ್ಥಕ? ಏನು ಸಾರ್ಥಕ?
ಮನೆಯ ಜನರೇ ಮಲಗಿ ನಿದ್ರಿಸುತಿದ್ದರೆ?
ಅನಾಮಿಕ ಕವಿಯ ಈ ಅರ್ಥಪೂರ್ಣ ಸಾಲುಗಳನ್ನು ಸದಾ ಗುನುಗುನಿಸುತ್ತಿರೋಣ.
(ಲೇಕಕರು ಬಿಜೆಪಿಯ ಹಿರಿಯ ವಕ್ತಾರರು)