ನಮ್ಮ ಅಭ್ಯರ್ಥಿಗಳೇ ಗೆಲ್ಲಲ್ಲಿದ್ದಾರೆ; ಸಿಎಂ, ಡಿಸಿಎಂ ವಿಶ್ವಾಸ

election-1
Published on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜತೆಗಿದ್ದರು.

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರ, ಪದವಿಧರ ಕ್ಷೇತ್ರದ ಚುನಾವಣೆಯುವ ಪಕ್ಷದ ಚುನಾವಣೆಯಾಗಬೇಕೆಂದು ಬಯಸಿದ್ದ ಕಾಂಗ್ರೆಸ್, ನಾಮ ಪತ್ರ ಸಲ್ಲಿಸುವ ವೇಳೆ ಸಚಿವರು, ಶಾಸಕರು ಹಾಗೂ ಸ್ವತಃ ತಾವೇ ಜತೆಗಿರಬೇಕೆಂದು ಸಿಎಂ, ಡಿಸಿಎಂ ಬಯಸಿದ್ದರು.

ಪದವೀಧರರ ಕ್ಷೇತ್ರದಿಂದ ರಾಮೋಜಿ ಗೌಡ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಬಿ. ಟಿ.ಶ್ರೋನಿವಾಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಸಚಿವರಾದ ಕೆ. ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ನಜೀರ್ ಅಹ್ಮದ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಜತೆಯಲ್ಲಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನಮ್ಮ ಮಾಹಿತಿ ಪ್ರಕಾರ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ. ಈ ಬಾರಿ ಕಾಂಗ್ರೆಸ್ ಆರು ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೆವು. ಈಗಾಗಲೇ ಎಲ್ಲಾ ಮತದಾರರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ ಎಂದರು.

ನಮ್ಮ ಇಬ್ಬರೂ ಸಮರ್ಥ ಅಭ್ಯರ್ಥಿಗಳು. ಶ್ರೀನಿವಾಸ್ ಅವರು ಶಿಕ್ಷಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರ ಧ್ವನಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಉಳ್ಳವರು. ರಾಮೋಜಿ ಗೌಡ ಅವರೂ ಶಿಕ್ಷಕರಾಗಿ ಕೆಲಸ ಮಾಡಿದ್ದವರು. ಅವರಿಗೂ ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿದೆ. ಅವುಗಳನ್ನು ಬಗೆಹರಿಸುವ ಶಕ್ತಿ ಅವರಿಗಿದೆ. ಹಾಗಾಗಿ ಇಬ್ಬರೂ ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಈ ಬಾರಿ ಚುನಾವಣೆ ನಡೆಯುತ್ತಿರುವ ಆರು ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಪದವೀಧರರು, ಶಿಕ್ಷಕರ ಸಮಸ್ಯೆ ಅರಿತಿದ್ದೇವೆ ಎಂದರು.

ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಕರು ಹಾಗೂ ಪದವಿಧರರ ಸಮಸ್ಯೆಗೆ ಪರಿಹಾರ ನೀಡಿಲ್ಲ, ಅದಕ್ಕೆಲ್ಲ ನಮ್ಮಲ್ಲಿ ಪರಿಹಾರ ಇದೆ. ಪ್ರಣಾಳಿಕೆಯಲ್ಲೂ ಈ ಬಗ್ಗೆ ಹೇಳಿದ್ದೇವೆ. ಎನ್‌ಇಪಿ, ಎನ್‌ಪಿಎಸ್ ವಿಚಾರ ಯಾವುದೇ ಇರಲಿ, ಕೆಲಸ ಮಾಡಿಕೊಡುವ ಜವಾಬ್ದಾರಿ ನಮ್ಮದು. ಬಿಜೆಪಿಯವರು ಶಿಕ್ಷಕರಿಗೆ, ಪದವೀಧರರಿಗೆ ಏನೂ ಕೊಟ್ಟಿಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net