

ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಒತ್ತುವರಿ ಮಾಡಿ ಉಪ ಖನಿಜ ತೆಗೆದು ರಾಯಧನ ಪಾವತಿಸದ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ದಂಡ ಹಾಗೂ ರಾಯಧನ ರೂಪದ 6,105 ಕೋಟಿ ರೂ.ಗಳನ್ನು ಒಂದು ಅವಧಿ ತೀರುವಳಿ ಮೂಲಕ ವಸೂಲಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ನಿಗದಿಗಿಂತ ಹೆಚ್ಚು ಉಪ ಖನಿಜ ತೆಗೆದು ರಾಯಧನ ಪಾವತಿಸಿರಲಿಲ್ಲ. 8 ವರ್ಷದಿಂದ ಈ ಹಣ ವಸೂಲಾಗಿರಲಿಲ್ಲ. ಈಗ ಒನ್ ಟೈಮ್ ಸೆಟಲ್ವೆುಂಟ್ (ಒಟಿಎಸ್) ಮೂಲಕ ರಾಯಧನ ವಸೂಲಿಗೆ ಸಿಎಂ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗುವುದು. ಈ ಉಪ ಸಮಿತಿ ಹಣ ವಸೂಲು ಮಾಡುವ ಕುರಿತು ನೀತಿ ನಿರೂಪಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊಟ್ಟೆಗೆ ವಿಭಾಗವಾರು ಟೆಂಡರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ 6 ತಿಂಗಳಿಂದ 6 ವರ್ಷದ ಒಳಗಿನ ಮಕ್ಕಳು ಹಾಗೂ ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆ ವಿತರಣೆ ವಿಚಾರದಲ್ಲಿ ವಿಭಾಗವಾರು ಮೊಟ್ಟೆ ಖರೀದಿಸಿ ವಿತರಿಸಲು ನಿರ್ಣಯಿಸಲಾಗಿದೆ.
ಕೆಟಿಪಿಪಿ ಕಾಯ್ದೆ ವಿನಾಯ್ತಿ ಅನ್ವಯ ಈ ಖರೀದಿ ಮಾಡಲಾಗುತ್ತದೆ. ಇದರಿಂದ ಖರೀದಿ ಪಾರದರ್ಶಕವಾಗಿ ನಡೆಯಲಿದೆ ಹಾಗೂ ಖರೀದಿ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯವಾಗಲಿದೆ ಎಂದು ಪಾಟೀಲ್ ಹೇಳಿದರು. ಈ ಮೊದಲು ತಾಲೂಕು ಮಟ್ಟದಲ್ಲಿ ಖರೀದಿ ಮಾಡಲಾಗುತ್ತಿತ್ತು. ಇನ್ನು ಕೆಲವು ಕಡೆ ಅಂಗನವಾಡಿ ಕಾರ್ಯಕರ್ತೆಯರೇ ಸ್ವಂತ ದುಡ್ಡಿನಿಂದ ಖರೀದಿಸುತ್ತಿದ್ದರು. ಅವರಿಗೆ ಸಕಾಲದಲ್ಲಿ ಹಣ ಪಾವತಿ ಆಗುತ್ತಿರಲಿಲ್ಲ. ಅವರು ಮುಂಗಡ ಹಣ ನೀಡುವಂತೆ ಕೇಳಿದ್ದರು. ಅದಕ್ಕೆ ಕಾಯ್ದೆಯಲ್ಲಿ ಅವಕಾಶ ಇಲ್ಲದಿರುವುದರಿಂದ ವಿಭಾಗವಾರು ಟೆಂಡರ್ ಕರೆದು ಮೊಟ್ಟೆ ವಿತರಣೆಗೆ ತೀರ್ವನಿಸಲಾಗಿದೆ. ಇದಕ್ಕಾಗಿ 297.19 ಕೋಟಿ ರೂ. ಮೀಸಲಿರಿಸಲಾಗಿದೆ. ಮೊಟ್ಟೆಯೊಂದಕ್ಕೆ 6 ರೂ. ಮೀರದಂತೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಚರಕ ಆಸ್ಪತ್ರೆ ನಿರ್ವಣಕ್ಕೆ ಅನುಮೋದನೆ: ಶಿವಾಜಿನಗರದ ಅಟಲ್ ವೈದ್ಯಕೀಯ ಕಾಲೇಜಿನಲ್ಲಿ ಚರಕ ಆಸ್ಪತ್ರೆ ನಿರ್ವಣಕ್ಕೆ 22.70 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಪ್ರೋ ಯೂರಾಲಜಿ ಸಂಸ್ಥೆಯ ಅನೆಕ್ಸ್ ಕಟ್ಟಡಕ್ಕೆ 26 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ದೊರೆತಿದೆ. ಈ ಪೈಕಿ 8.50 ಕೋಟಿ ರೂ. ರಾಜ್ಯ ಸರ್ಕಾರದಿಂದ ಹಾಗೂ 17.50 ಕೋಟಿ ರೂ.ಗಳನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಕ್ರೋಡೀಕರಿಸಿ ವಿನಿಯೋಗಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದರು. ಮುದ್ದೇನಹಳ್ಳಿ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ವಿಷಯದ ಚರ್ಚೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.
ಹಾಲಿನ ದರ 3 ರೂ. ಹೆಚ್ಚಳಕ್ಕೆ ಅಸ್ತು: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡುವ ಕುರಿತು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆಯಲ್ಲಿ ಇತ್ತೀಚೆಗೆ ಲೀಟರ್ಗೆ 3 ರೂ. ಹೆಚ್ಚಿಸಲು ತೀರ್ವನಿಸ ಲಾಗಿತ್ತು. ಈ ಹೆಚ್ಚಳಕ್ಕೆ ಈಗ ಸಚಿವ ಸಂಪುಟದ ಮುದ್ರೆ ಸಿಕ್ಕಿದೆ.
ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸಚಿವ ಸಂಪುಟ ಸಭೆ ನಿರ್ಣಯಿಸಿದೆ. ಲೋಕೋಪಯೋಗಿ ಇಲಾಖೆಯಡಿ ಕೈಗೊಳ್ಳುವ ಕಾಮಗಾರಿಗಳ ಪೈಕಿ ಪಿಪಿಪಿ ಯೋಜನೆಯಡಿ ಅನುಷ್ಠಾನ ಮಾಡುವ ಯೋಜನೆಗಳಿಗೆ ಮಾತ್ರ ಅನ್ವಯವಾಗುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಪ್ರಾಧಿಕಾರವು ರಾಜ್ಯದ ಪ್ರಮುಖ ರಸ್ತೆಗಳ ಅಭಿವೃದ್ಧಿ ಯೋಜನೆಯ ಆದ್ಯತಾ ಪಟ್ಟಿಗಳನ್ನು ರಚಿಸಲಿದೆ. ಅಂತಾರಾಜ್ಯ ಸಂರ್ಪಸುವ ಹೆದ್ದಾರಿಗಳು, ಕೈಗಾರಿಕಾ ಕಾರಿಡಾರ್, ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಯೋಜನಾ ವರದಿ ಹಾಗೂ ಕಾರ್ಯಸಾಧ್ಯತಾ ವರದಿ ತಯಾರಿಸುವುದು, ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಖಾಸಗಿ ಬಂಡವಾಳ ಆಕರ್ಷಿಸಲು ಸೂಕ್ತ ಯೋಜನೆ ರಚಿಸುವುದು, ತಾತ್ವಿಕ ಅನುಮೋದನೆ ನೀಡುವುದು ಈ ಪ್ರಾಧಿಕಾರದ ಉದ್ದೇಶಗಳಾಗಿವೆ. ಪಿಪಿಪಿ ಗುತ್ತಿಗೆಗಳ ಸಂಗ್ರಹಣೆ, ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಅತ್ಯುತ್ತಮ ಮಾನದಂಡಗಳ ಅನುಗುಣವಾಗಿ ಮಾರ್ಗಸೂಚಿಗಳನ್ನು ಹಾಗೂ ಸಂಗ್ರಹಣ ವಿಧಾನಗಳನ್ನು ರಚನೆ ಮಾಡಲಿದೆ ಎಂದು ಪಾಟೀಲ ತಿಳಿಸಿದರು.
ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರದ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು 67 ಸಜಾ ಬಂಧಿಗಳನ್ನು ಸನ್ನಡತೆ ಮತ್ತಿತರ ಕಾರಣಗಳಿಂದ ಬಿಡುಗಡೆ ಮಾಡಲು ತೀರ್ವನಿಸಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಬೆಳಗಾವಿ, ಧಾರವಾಡದಲ್ಲಿರುವ ಕಾರಾಗೃಹಗಳಿಂದ ಈ ಸಜಾ ಬಂಧಿಗಳನ್ನು ಆ.15ರಂದು ಬಿಡುಗಡೆ ಮಾಡಲಾಗುತ್ತದೆ.