

ಲಾಸ್ ಏಜೆಂಲಿಸ್: ಆಸ್ಕರ್ ಪ್ರಶಸ್ತಿ 2024ರ ಸಮಾರಂಭವು ಇದೀಗ ಎಲ್ಲರ ಗಮನಸೆಳೆಯುತ್ತಿದ್ದು, ಯಾರ ಮುಡಿಗೆ ಪ್ರತಿಷ್ಟಿತ ಪ್ರಶಸ್ತಿಗಳು ಸೇರಲಿವೆ ಎಂಬ ನಿರೀಕ್ಷೆಗಳು ಸಿನಿಪ್ರೇಕ್ಷಕರಲ್ಲಿ ಹೆಚ್ಚಿದೆ. ಈ ಮಧ್ಯೆ ವೇದಿಕೆಗೆ ಬೆತ್ತಲಾಗಿ ಬಂದ ಜನಪ್ರಿಯ ಡಬ್ಲ್ಯೂಡಬ್ಲ್ಯೂಇ ಸೂಪರ್ಸ್ಟಾರ್, ಹಾಲಿವುಡ್ ನಟ ಜಾನ್ ಸೀನಾ ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗುತ್ತಿದೆ.
ಹೆಚ್ಚು ನಿರೀಕ್ಷಿತ ಪ್ರಶಸ್ತಿಗಳಲ್ಲಿ ಒಂದಾದ ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಅವಾರ್ಡ್ ಕೊಡಲು ವೇದಿಕೆಗೆ ವಿಭಿನ್ನ ರೀತಿ ಮೋಡಿ ಮಾಡಲು ಆಗಮಿಸಿದ ಜಾನ್ ಸೀನಾ, ಪ್ರಶಸ್ತಿ ಘೋಷಿಸಲು ನಗ್ನವಾಗಿ ಮೈಕ್ ಮುಂದೆ ನಿಂತು ಮಾತಾಡಿರುವುದು ಸದ್ಯ ನೆಟ್ಟಿಗರನ್ನು ತಬ್ಬಿಬ್ಬಾಗುವಂತೆ ಮಾಡಿದೆ. ಧೈರ್ಯದಿಂದ ಬಟ್ಟೆಯಿಲ್ಲದೆ ವೇದಿಕೆಯ ಮೇಲೆ ಹೋದ ಜಾನ್ ಸೀನ್ ಅವರ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಆತಿಥೇಯ ಜಿಮ್ಮಿ ಕಿಮ್ಮೆಲ್ ಹಾಗೂ ಜಾನ್ ಸೀನಾ ಅವರ ತಮಾಷೆಯು ನೋಡುಗರನ್ನು ಮೋಡಿ ಮಾಡಿದ್ದು, ಜಾನ್ ವೇಷಭೂಷಣದ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಗಣ್ಯರ ಮುಂದೆ ಮಾತುಕತೆ ನಡೆಸಿದ್ದಾರೆ. ಆಸ್ಕರ್ ಪ್ರಶಸ್ತಿ 2024ರ ಸಾಲಿನಲ್ಲಿ ಈ ಬಾರಿ ಹೆಚ್ಚುವರಿ ಅವಾರ್ಡ್ಗಳು ಓಪನ್ಹೈಮರ್ ಚಿತ್ರಕ್ಕೆ ಒಲಿದುಬಂದಿರುವುದು ಮತ್ತಷ್ಟು ವಿಶೇಷ,(ಏಜೆನ್ಸೀಸ್).