'ಆಲೂಗಡ್ಡೆಯಿಂದ ಚಿನ್ನ..' ಹಾಗಂದಿದ್ದು ಯಾರು? ರಾಹುಲ್​ ಗಾಂಧಿ ಅಥವಾ ನರೇಂದ್ರ ಮೋದಿ?!

modi and rahul
Published on

ನವದೆಹಲಿ: ಆಲೂಗಡ್ಡೆಯಿಂದ ಚಿನ್ನ ತೆಗೆಯುತ್ತೇವೆ ಎಂದು ಹೇಳಿದ್ದು ಯಾರು ಎಂದರೆ ಹಲವರು ಥಟ್​ ಎಂದು ಉತ್ತರ ಹೇಳಿಬಿಡುತ್ತಾರೆ. ಆದರೆ ಇದೀಗ ಅದು ರಾಹುಲ್​ ಗಾಂಧಿ ಹೇಳಿಕೆಯೋ ಅಥವಾ ನರೇಂದ್ರ ಮೋದಿ ಹೇಳಿದ್ದೋ ಎಂಬ ಗೊಂದಲವೊಂದು ಮೂಡಿ ಮರೆಯಾಗಿದೆ.

2017ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್​ ನೇತಾರ ರಾಹುಲ್​ ಗಾಂಧಿ, 'ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಲ್ಲಿ ಚಿನ್ನ ಬರುವಂಥ ಮಷಿನ್​ ಹಾಕುತ್ತೇವೆ' ಎಂಬುದಾಗಿ ಹೇಳಿದ್ದರು.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತುಣುಕೊಂದಕ್ಕೆ, '..ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ ಮತ್ತೊಂದು ಕಡೆಯಲ್ಲಿ ಚಿನ್ನ ಬರುತ್ತದೆ..' ಎಂದು ಅವರೇ ಹೇಳಿದ ಹಾಗನಿಸುವಂತೆ ಕಾಣಿಸುವ/ಕೇಳಿಸುವ ವಿಡಿಯೋವೊಂದನ್ನು ಕಾಂಗ್ರೆಸ್​ ಬೆಂಬಲಿಗರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಸದ್ಯ 3 ಕಾಯ್ದೆಗಳ ತಿದ್ದುಪಡಿ ವಿರುದ್ಧ ಕ್ಯಾಂಪೇನ್​ ಮಾಡುವ ಹಿನ್ನೆಲೆಯಲ್ಲಿ ಅವರು ಈ ವಿಡಿಯೋ ಬಳಸಿದ್ದಾರೆ. ಈ ಮೂಲಕ ಹಲವರು, ಮೋದಿಯವರೇ ಮೊದಲು ಆ ಹೇಳಿಕೆ ನೀಡಿದ್ದು ಎಂದು ಬಿಂಬಿಸಲು ಯತ್ನಿಸಿದ್ದರು. ಈ ಬಗ್ಗೆ ಆಲ್ಟ್​ನ್ಯೂಸ್​ ಸಂಸ್ಥೆ ಫ್ಯಾಕ್ಟ್​ ಚೆಕ್​ ಮಾಡಿ, ಅಸಲಿಯತ್ತು ಏನೆಂಬುದನ್ನು ಬಹಿರಂಗಪಡಿಸಿದೆ.

2019ರ ಏಪ್ರಿಲ್​ 27ರಂದು ಬಿಜೆಪಿಯ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ಪ್ರಸಾರವಾಗಿದ್ದ ಮೋದಿಯವರ ಭಾಷಣದ ತುಣುಕಿಗೆ, ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ಹೇಳಿಕೆ ನೀಡಿದಂತೆ ಭಾಸವಾಗುವಂತೆ ಎಡಿಟ್ ಮಾಡಿ ಗೊಂದಲ ಮೂಡಿಸಲಾಗಿದೆ. ಪ್ರಧಾನಿ ಮೋದಿ ಆ ರೀತಿ ಹೇಳಿಲ್ಲ ಎಂದು ಆಲ್ಟ್​ನ್ಯೂಸ್​ ಫ್ಯಾಕ್ಟ್​ ಚೆಕ್​ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net