

ಸೊರಬ: ಸಂಸ್ಕೃತ ಸಾಹಿತ್ಯದಲ್ಲಿ ಆದಿಕವಿ ಎಂದು ಕರೆಯಲ್ಪಡುವ ಮಹರ್ಷಿ ವಾಲ್ಮೀಕಿ ಅವರು ಬರೆದ ಮಹಾಕಾವ್ಯ ರಾಮಾಯಣ ಯುವಪೀಳಿಗೆಗೆ ಮಾರ್ಗದರ್ಶಕ ಎಂದು ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಎಸ್.ಗಣಪತಿ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ, ತಾಲೂಕು ವಾಲ್ಮೀಕಿ ಸಮಾಜ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅವರ ಜೀವನಚರಿತ್ರೆ ಮತ್ತು ಅವರ ಮೌಲ್ಯಯುತ ಬೋಧನೆಗಳನ್ನು ಸ್ಮರಿಸಬೇಕು. ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಜತೆಗೆ ಸರ್ಕಾರದ ಸೌಲಭ್ಯ ಪಡೆಯಲು ಒಗ್ಗಟ್ಟಾಗಿರಬೇಕು ಎಂದರು.
ವಾಲ್ಮೀಕಿ ಅವರ ಜೀವನ ಮತ್ತ ಸಂದೇಶಗಳ ಕುರಿತು ಉಪನ್ಯಾಸ ನೀಡಿದ ಸುಳ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜಿ.ಶಿವಾನಂದ, ಕುವೆಂಪು ಅವರು ರಚಿಸಿದ ಶ್ರೀ ರಾಮಾಯಣದರ್ಶನಂ ಕೃತಿಗೆ ವಾಲ್ಮೀಕಿ ಅವರು ರಚಿಸಿದ ರಾಮಾಯಾಣ ಪ್ರೇರಣೆ. ಕರ್ತವ್ಯ, ಸತ್ಯನಿಷ್ಠೆ, ನ್ಯಾಯ ಮತ್ತು ಕರುಣೆಯಂತಹ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಸುಮಾರು 300 ರೂಪಗಳಲ್ಲಿ ಹಾಗೂ 48 ಭಾಷೆಗಳಿಗೆ ಭಾಷಾಂತರಗೊಂಡ ಮಹಾನ್ ಗ್ರಂಥ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಸಮಾಜದ ಉದ್ಯಮಿ ಹನುಮಂತಪ್ಪ, ಜಗದೀಶಪ್ಪ ದೊಡ್ಡಮನಿ, ಹನುಮಂತಪ್ಪ ಕನ್ನಣ್ಣನವರ್, ಟಿ.ನಾಗಪ್ಪ, ಸೋಮಪ್ಪ, ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಕೆ.ಪುರಂದರ, ಸಮಾಜದ ತಾಲೂಕು ಗೌರವಾಧ್ಯಕ್ಷ ಮಹಾಂತೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ಗ್ರೇಡ್-2) ಇಕ್ಬಾಲ್ ಜಾತೀಗೇರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರದೀಪ್‌ಕುಮಾರ್, ಬಿಇಒ ಆರ್.ಪುಷ್ಪಾ, ಕೆ.ಶಿವಪ್ಪ, ಬಿ. ಶಂಕರ್ ಇತರರಿದ್ದರು.