

ಸೊರಬ: ದೇಶ ಮತ್ತು ಸಮಾಜ ಸಮಾನತೆಯಿಂದ ಮುಂದೆ ಸಾಗಿ ಅಭಿವೃದ್ಧಿ ಹೊಂದಲು ಮೊದಲು ಮಹಿಳೆಯರು ಸಂಘಟಿತರಾಗಬೇಕಿದೆ ಎಂದು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್.ರಾಮಪ್ಪ ಅಭಿಪ್ರಾಯಪಟ್ಟರು.
ತಾಲೂಕು ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ಹಾಗೂ ಮಹಿಳಾ ಘಟಕದ ಆಶ್ರಯದಲ್ಲಿ ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘಟನೆ ಹಾಗೂ ಶಿಕ್ಷಣದಲ್ಲಿ ಕೊಂಚ ಹಿಂದುಳಿದ ನಮ್ಮ ಸಮಾಜಕ್ಕೆ ಬಲ ತುಂಬಬೇಕಿದೆ. ಇನ್ನೊಬ್ಬರನ್ನು ಒಡೆಯಲು ಸಂಘಟನೆಗೆ ಒತ್ತು ನೀಡುವುದಲ್ಲ. ಸಮಾಜದಲ್ಲಿ ಹಿಂದುಳಿದ ವರ್ಗದ ಜನರಿಗೆ ಸಹಕಾರ ನೀಡುವುದೇ ನಮ್ಮ ಉದ್ದೇಶವಾಗಿರಬೇಕು. ದಾನ, ಧರ್ಮದ ಮೂಲಕ ಇನ್ನೊಬ್ಬರಿಗೆ ಸಹಕಾರ ನೀಡುವ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.
ಸಮಾಜದಲ್ಲಿ ಸಾಧನೆ ಮಾಡಲು ಹಣವೊಂದೇ ಮಾನದಂಡವಲ್ಲ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಬಳಿ ತೆರಳಿ ಸಲಹೆ, ಸಹಕಾರ ಪಡೆಯುವುದು ಕೂಡ ಮುಖ್ಯ. ಆರ್ಥಿಕವಾಗಿ ಮೇಲೆ ಬರಲು ಛಲದ ಜತೆಗೆ ಒಗ್ಗಟ್ಟು ಮುಖ್ಯ. ಇದನ್ನು ಅರಿತು ಮುಂದೆ ಸಾಗಿದಾಗ ಯಶಸ್ಸು ಸಾಧ್ಯ. ಮಾಜಿ ಸಿಎಂ ಬಂಗಾರಪ್ಪ ಅವರು ತಮ್ಮ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಮತ್ತಿತರ ಸೌಲಭ್ಯ ನೀಡುವ ಮೂಲಕ ಆರ್ಥಿಕ ಪ್ರಗತಿಗೆ ಕಾರಣರಾದರು. ನಮ್ಮ ಪ್ರಗತಿಗೆ ಕಾರಣರಾದವನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ರಾಜು ಹಿರಿಯಾವಲಿ ಮಾತನಾಡಿ, ಕೇವಲ ಸ್ಥಾನಮಾನಕ್ಕಾಗಿ ಸಮಾಜದ ಸಂಘಟನೆ ಮಾಡುವುದಲ್ಲ. ನಮ್ಮ ಸಮಾಜವನ್ನು ಗಟ್ಟಿಗೊಳ್ಳಿಸಿಕೊಳ್ಳುವ ಜತೆಗೆ ಇತರೆ ಸಮಾಜಗಳ ಜತೆ ಪ್ರೀತಿ, ಬಾಂಧವ್ಯದಿಂದ ಬೆರೆಯುವ ಪ್ರಯತ್ನ ಮಾಡಬೇಕು ಎಂದರು.
ಸಮಾಜದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಬಿಎಸ್‌ಎನ್‌ಡಿಪಿ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಲೋಕೇಶ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ್, ತಾಲೂಕು ಮಹಿಳಾ ಅಧ್ಯಕ್ಷೆ ಸುಮಾ ಲೋಕೇಶ್, ಜಿಲ್ಲಾಧ್ಯಕ್ಷ ಎಸ್.ಡಿ.ನಾಯ್ಕ, ಉಪನ್ಯಾಸಕ ರವಿ ಕಲ್ಲಂಬಿ, ನಾಗರಾಜ್, ಕಾಂತರಾಜ್, ದುರ್ಗಪ್ಪ, ಸಂಗೀ ಗಣಪತಿ, ವನಿತಾ, ಅನಸೂಯಾ, ಶಾಂತಮ್ಮ, ಶಾಮಲಾ ಇತರರಿದ್ದರು.