ಸಾಮಾನ್ಯ, ಅಸಾಮಾನ್ಯ

1-68125dbcbf4ce
Published on
ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಸಾಮಾನ್ಯ ಹಾಗೂ ಅಸಾಮಾನ್ಯ ಎಂದು. ಇದು ಬಹಳ ಸೂಕ್ಷ್ಮ ವಿಚಾರ. ಸಾಮಾನ್ಯ ಜೀವಿ ಎಂದರೆ ಅಜ್ಞಾನಿ. ಈತನಿಗೆ ಪೂರ್ಣ ಜ್ಞಾನವಿರುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಈತ ಪ್ರಥಮ ಸ್ಥಾನದಲ್ಲಿ ಉತ್ತೀರ್ಣನಾಗಿರಬಹುದು.

ಆದರೆ ಜೀವನವನ್ನು ಅರಿಯುವುದರಲ್ಲಿ ಮಾತ್ರ ಅಜ್ಞಾನಿ. ಜೀವನದ ಪಾಠದ ಪೂರ್ಣ ಅಧ್ಯಯನ ಈತನಿಗೆ ಆಗಿರುವುದಿಲ್ಲ. ಇನ್ನೊಬ್ಬ ಅಸಾಮಾನ್ಯ. ಈತ ಎಲ್ಲರಂತಲ್ಲ. ತಾನು ಮಾಡುವ ಸ್ವಲ್ಪ ಕೆಲಸವನ್ನೂ ವಿಚಾರಮಾಡಿ ಮಾಡುತ್ತಾನೆ. ಇವರಿಬ್ಬರಿಗೂ ಇರುವುದು ಒಂದೇ ಜಗತ್ತು. ಇಬ್ಬರಿಗೂ ಸಾಮಾನ್ಯವಾದ ಸಮಸ್ಯೆಗಳಿರುತ್ತವೆ. ಉದಾಹರಣೆ ಹೊಟ್ಟೆಯ ‘ಹಸಿವು’. ಹೊಟ್ಟೆ ತುಂಬಿಸಿಕೊಳ್ಳಲು ಇಬ್ಬರೂ ಪ್ರಯತ್ನಿಸಬೇಕು. ವ್ಯತ್ಯಾಸ ಇರುವುದು ಹೊಟ್ಟೆ ತುಂಬಿದ ಮೇಲೆ.

ಸಾಮಾನ್ಯ ವ್ಯಕ್ತಿಯ ಜೀವನ ಶೈಲಿ ಹೊಟ್ಟೆ ತುಂಬಿದ ಮೇಲೆ ಬದಲಾಗುತ್ತದೆ. ಆದರೆ ಅಸಾಮಾನ್ಯ ಬದಲಾಗುವುದಿಲ್ಲ. ಅಹಂಕಾರವು ನಮ್ಮ ಜಾತಿಯಲ್ಲಿ, ಗುಣದಲ್ಲಿ, ವೃತ್ತಿಯಲ್ಲಿ ಹೀಗೆ ನಾನಾ ಕಡೆಗಳಲ್ಲಿ ಬರುತ್ತದೆ. ತನ್ನ ಭಾಷೆಯೇ ಶ್ರೇಷ್ಠ ಇತ್ಯಾದಿ ಭಾವನೆಯಿಂದ ಬಹಳಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಇದು ಯಾರೂ ಪ್ರಚೋದಿಸಿದ್ದಲ್ಲ. ಸ್ವತಃ ತಾನೇ ಅದರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾಗಿರುತ್ತದೆ. ಎಲ್ಲಿ ಅಹಂಕಾರವು ಇರುವುದೋ ಅದರ ಕೊನೆ ದುಃಖಪ್ರದವಾಗಿರುತ್ತದೆ.

ಈ ಜನ್ಮದಲ್ಲಿ ನಾನು ಈ ನಾಡಲ್ಲಿ ಹುಟ್ಟಿರುವೆ. ಆದ್ದರಿಂದ ಇದು ನನ್ನದೆಂಬ ಅಭಿಮಾನ. ಹಿಂದೆ ನಾನೆಲ್ಲಿದ್ದೆ, ಮುಂದೆ ನಾನೆಲ್ಲಿರುವೆ ನನಗೆ ತಿಳಿಯದಾಗಿರುತ್ತದೆ. ಮಾನವನ ಸಹಜ ಗುಣ, ಇರುವಾಗ ಇದ್ದ ಸ್ಥಳವನ್ನು ತನ್ನದೆನ್ನುವುದು. ಜ್ಞಾನಿಯ ಮಾತೇ ಬೇರೆ. ಈ ಒಂದು ಕ್ಷಣ ನನ್ನದೆನ್ನುವುದರ ಬದಲಾಗಿ ಎಲ್ಲವೂ ನನ್ನದೆಂದು ಭಾವಿಸು. ಜಾತಿ, ಕುಲ, ಗೋತ್ರ ಇವುಗಳನ್ನು ದೂರತಳ್ಳಿ ಪ್ರಾಣಿ, ಪಕ್ಷಿ, ಕೀಟ ಹೀಗೆ ಎಲ್ಲಾ ಜೀವಿಗಳು ನನ್ನಂತೆಯೇ ಎಂದು ಅರಿತಾಗ ದ್ವೇಷ ದೂರವಾಗಿ ಸ್ನೇಹ ನಮ್ಮ ಹೃದಯದಲ್ಲಿ ಚಿಗುರುತ್ತದೆ. ಅಂದು ಅಹಂಕಾರವು ನಮ್ಮಿಂದ ದೂರವಾಯಿತೆಂದು ತಿಳಿಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net