

ಲಖನೌ: ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಪಕ್ಕದ ಜ್ಞಾನವಾಪಿ ಮಸೀದಿ ಜಾಗದ ವಿವಾದಕ್ಕೆ ಸಂಬಂಧಿಸಿ ವಾರಾಣಸಿ ಜಿಲ್ಲಾ ಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ. ವಿವಾದಿತ ಮಸೀದಿ ಸಂಕೀರ್ಣದ ಪುರಾತತ್ತ್ವ ಸಮೀಕ್ಷೆಗೆ ಅವಕಾಶ ನೀಡಿದೆ. ಅಯೋಧ್ಯೆ ಶ್ರೀರಾಮಜನ್ಮಭೂಮಿ ವಿವಾದ ಕೋರ್ಟ್ನಲ್ಲಿ ಇತ್ಯರ್ಥವಾದ ಬಳಿಕ, ಮಥುರಾ ಮತ್ತು ಕಾಶಿ ಕ್ಷೇತ್ರಗಳ ವಿವಾದ ಕೋರ್ಟ್ ವಿಚಾರಣೆಯಲ್ಲಿದ್ದು, ಕಾಶಿಗೆ ಸಂಬಂಧಿಸಿ ಪ್ರಮುಖ ಆದೇಶ ಹೊರಬಿದ್ದಿದೆ.
ಸ್ಥಳೀಯ ವಕೀಲ ವಿಜಯ ಶಂಕರ್ ರಸ್ತೋಗಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ವಾರಾಣಸಿ ಸಿವಿಲ್ ಕೋರ್ಟ್ನ ಸಿವಿಲ್ ನ್ಯಾಯಾಧೀಶ (ಹಿರಿಯರ ವಿಭಾಗ) ಆಶುತೋಶ್ ತಿವಾರಿ ಈ ಮಹತ್ವದ ಆದೇಶ ನೀಡಿದ್ದಾರೆ. ಇದಕ್ಕಾಗಿ ಭಾರತೀಯ ಪುರಾತತ್ತ್ವ ಇಲಾಖೆ ಪಂಚ ಸದಸ್ಯರ ಸಮಿತಿ ರಚಿಸಬೇಕು. ಆ ಸಮಿತಿ ನಿಗದಿತ ಮಾರ್ಗಸೂಚಿ ಪ್ರಕಾರ ಸಮೀಕ್ಷಾ ಕಾರ್ಯ ನಡೆಸಬೇಕು. ಸಮೀಕ್ಷೆ ಮುಗಿದ ಬಳಿಕ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಟ್ಟು ತಡಮಾಡದೇ ಕೋರ್ಟ್ಗೆ ಸಲ್ಲಿಸಬೇಕು. ಕೇಸ್ನ ಮುಂದಿನ ವಿಚಾರಣೆ ಮೇ 31ರಂದು ನಡೆಯಲಿದೆ ಎಂದು ಕೋರ್ಟ್ ಹೇಳಿದೆ. ರಸ್ತೋಗಿ ಸಲ್ಲಿಸಿದ್ದ ಅರ್ಜಿಗೆ ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು.
1991: ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ (ದೇವರು) ಪರವಾಗಿ ವಾರಾಣಸಿ ಸಿವಿಲ್ ಕೋರ್ಟ್ ನಲ್ಲಿ ಮೊದಲ ಪಿಟಿಷನ್ ದಾಖಲು. ಜ್ಞಾನವಾಪಿ ಕಾಂಪ್ಲೆಕ್ಸ್ ನಲ್ಲಿ ವಿಶ್ವನಾಥನ ಆರಾಧನೆಗೆ ಅವಕಾಶ ನೀಡುವಂತೆ ಕೋರಿದ್ದರು. ಅಲ್ಲದೆ, ಸಂಕೀರ್ಣ ಕಾಶಿ ದೇವಸ್ಥಾನದ ಭಾಗವೆಂದು ಘೋಷಿಸಬೇಕು, ಕಾಂಪ್ಲೆಕ್ಸ್ ಪ್ರದೇಶ ದಿಂದ ಮುಸ್ಲಿಮರನ್ನು ಹೊರಹಾಕಬೇಕು, ದೇವಸ್ಥಾನ ಪುನರ್ನಿರ್ವಣಕ್ಕೆ ಹಿಂದುಗಳಿಗೆ ಅನುಮತಿ ನೀಡಬೇಕೆಂದು ಕೋರ್ಟ್ಗೆ ಮನವಿ ಮಾಡಿದ್ದರು.
1998: ಅರ್ಜಿ ವಿಚಾರಣೆಗೆ ತಡೆಕೋರಿ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿತ್ತು. ಇದರಂತೆ ಜಿಲ್ಲಾ ಕೋರ್ಟ್ ವಿಚಾರಣೆಗೆ ಕಳೆದ 22 ವರ್ಷದಿಂದ ತಡೆಬಿದ್ದಿತ್ತು.
2019 ಡಿಸೆಂಬರ್: ವಿಜಯ ಶಂಕರ ರಸ್ತೋಗಿ ಅವರು ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ ದೇವರ ಪರವಾಗಿ ವಾರಾಣಸಿ ಜಿಲ್ಲಾ ಕೋರ್ಟ್ನಲ್ಲಿ ದಾವೆ ಹೂಡಿದರು. ಮಸೀದಿ ಸಂಕೀರ್ಣದ ಪುರಾತತ್ತ್ವ ಸಮೀಕ್ಷೆ ನಡೆಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು. ದೇವರ ‘ಸ್ನೇಹಿತ’ ಎಂಬ ನೆಲೆಯಲ್ಲಿ ರಸ್ತೋಗಿ ದಾವೆ ಹೂಡಿದ್ದರು.
2020 ಜನವರಿ: ರಸ್ತೋಗಿ ಅರ್ಜಿಗೆ ಅಂಜುಮಾನ್ ಇಂತೆ ಜಾಮಿಯಾ ಮಸೀದಿ ಸಮಿತಿ ವಿರೋಧ ವ್ಯಕ್ತಪಡಿಸಿ ಕೋರ್ಟ್ಗೆ ಅರ್ಜಿ
ಫೆಬ್ರವರಿ: ಅಲಹಾಬಾದ್ ಹೈಕೋರ್ಟ್ ತಡೆ ವಿಸ್ತರಿಸದ ಕಾರಣ ವಿಚಾರಣೆ ಮುಂದುವರಿಸಲು ರಸ್ತೋಗಿ ಜಿಲ್ಲಾ ಕೋರ್ಟ್ಗೆ ಮನವಿ ಮಾಡಿದ್ದರು.