ಪ್ರೌಢಶಾಲಾ ಮುಖ್ಯ ಶಿಕ್ಷಕರ ವೇತನ ಬಡ್ತಿಯ ಹೆಚ್ಚುವರಿ ಹಣ ವಸೂಲಿಗೆ ಆದೇಶ: ಎಷ್ಟು ಸಾವಿರ ಶಿಕ್ಷಕರಿಗೆ ಅನ್ವಯವಾಗಲಿದೆ ಈ ನಿಯಮ?

money 1
ಸಾಂದರ್ಭಿಕ ಚಿತ್ರ
Published on

ಬೆಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ 2016ರ ಜೂ.1ರಿಂದ ಜಾರಿಗೆ ಬರುವಂತೆ ನೀಡಲಾಗಿದ್ದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಿರುವ ಸರ್ಕಾರಕ್ಕೆ ಆಗಿರುವ ಹೆಚ್ಚುವರಿ ಆರ್ಥಿಕ ನಷ್ಟವನ್ನು ಹಿಂದಿರುಗಿಸುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ಪಿಯು ಕಾಲೇಜು ಉಪನ್ಯಾಸಕರು ಮತ್ತು ಪ್ರೌಢಶಾಲಾ ಶಿಕ್ಷಕರ ವೇತನ ಸರಿದೂಗಿರುವ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಕುಮಾರ್‌ನಾಯಕ್ ನೇತೃತ್ವದ ಸಮಿತಿ ವರದಿ ಆಧಾರದಲ್ಲಿ ವೇತನ ಬಡ್ತಿಯನ್ನು ೋಷಿಸಿತ್ತು.

ಮಹಾಲೇಖಪಾಲರ ಆಕ್ಷೇಪ:

ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ, ಅನುದಾನಿತ ಪ್ರೌಢಶಾಲೆ ಶಿಕ್ಷಕರು, ಮುಖ್ಯ ಶಿಕ್ಷಕರಿಗೆ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಲಾಗಿತ್ತು. ಈ ಹೆಚ್ಚುವರಿ ವೇತನ ಬಡ್ತಿಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲು ಅವಕಾಶವಿರುವುದಿಲ್ಲ. ಆದರೆ, ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಆಯಾ ಶಿಕ್ಷಕರಿಗೆ ಅನ್ವಯಿಸುವ ವೇತನ ಶ್ರೇಣಿಗಳಲ್ಲಿ ಮೂಲ ವೇತನದೊಂದಿಗೆ 2018ರ ನ.1ರಿಂದ ಜಾರಿಗೆ ಬರುವಂತೆ ವಿಲೀನಗೊಳಿಸಿ ಆದೇಶಿಸಲಾಗಿತ್ತು. ಈ ಮೂಲ ವೇತನದೊಂದಿಗೆ ಹೆಚ್ಚುವರಿ ವೇತನ ಸೇರಿಸಿರುವ ಪ್ರಕರಣವನ್ನು ಮಹಾಲೇಖಪಾಲರು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಹಾಲೇಖಪಾಲರ ಪತ್ರದಲ್ಲಿನ ಸೂಚನೆಯಂತೆ ಯಾವುದೇ ಹೊಸ ಬಡ್ತಿ ಪ್ರಕರಣಗಳಲ್ಲಿ ಮತ್ತು ಪಿಂಚಣಿ ಪ್ರಕರಣದಲ್ಲಿಯೂ ಮಹಾಲೇಖಪಾಲರು ನಿಗದಿಗೊಳಿಸಿರುವ ಮಾದರಿ ನಮೂನೆಯಂತೆ ದೃಢೀಕರಣಗಳನ್ನು ಆಯಾ ಮೇಲಧಿಕಾರಿಗಳು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದೆ.

ವಸೂಲಿಗೆ ಕ್ರಮ ವಹಿಸಿ:

ಜಿಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯ ಬಟವಾಡೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಬೇಕು. ಮೇಲಧಿಕಾರಿಗಳೂ ಕಡ್ಡಾಯವಾಗಿ ಸೂಕ್ತ ಪರಿಶೀಲನೆ ಕೈಗೊಂಡು ಹೆಚ್ಚುವರಿ ಪಾವತಿಯಾಗಿದ್ದಲ್ಲಿ ವಸೂಲಾತಿಗೆ ಕ್ರಮ ವಹಿಸಬೇಕು. ಕ್ರೋಢೀಕೃತ ವರದಿಯನ್ನು ಸೆ.30ರೊಳಗೆ ತಲುಪುವಂತೆ ಸಲ್ಲಿಸಲು ಸೂಚಿಸಿದೆ. ಹಾಗೆಯೇ ಮುಂದಿನ ತ್ರೈಮಾಸಿಕ ಅವಧಿಗಳಲ್ಲಿಯೂ ಇಂತಹ ಪ್ರಕರಣಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಕಾಲಕಾಲಕ್ಕೆ ವರದಿ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಅಂದಾಜು 7 ಸಾವಿರ ಅನ್ವಯ

ಸರ್ಕಾರದ ಈ ಆದೇಶವು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರು, ಬಡ್ತಿ ಪಡೆದಿರುವ ಉಪನ್ಯಾಸಕರು, ಇದೇ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಉಪನಿರ್ದೇಶಕರು ಸೇರಿ ಇಲಾಖೆಯಲ್ಲಿ ಅಂದಾಜು 7 ಸಾವಿರ ನೌಕರರಿಗೆ ಈ ನಿಯಮವು ಅನ್ವಯವಾಗಲಿದೆ.

ಈ ಹಿಂದೆ ಪ್ರೌಢಶಾಲಾ ಸಹ ಶಿಕ್ಷಕರಿಂದಲೂ ಹೆಚ್ಚುವರಿ ಹಣ ಹಿಂದಿರುಗಿಸುವಂತೆ ಆದೇಶಿಸಲಾಗಿತ್ತು. ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿತ್ತು. ನಂತರ ಸರ್ಕಾರದ ಪರವಾಗಿ ತೀರ್ಪು ಪ್ರಕಟವಾಗಿತ್ತು.

ಸಮಸ್ಯೆ ಏನು?

ಹೆಚ್ಚುವರಿ ವೇತನ ಬಡ್ತಿಯನ್ನು ಮೂಲ ವೇತನದಲ್ಲಿ ಸೇರಿಸುವುದರಿಂದ ಸರ್ಕಾರಿ ನೌಕರರ ಎಚ್‌ಆರ್‌ಎ, ಡಿಎ ಸೇರಿ ಹಲವು ಸವಲತ್ತುಗಳ ಖರ್ಚು ಕೂಡ ಸರ್ಕಾರಕ್ಕೆ ಹೆಚ್ಚುವರಿಯಾಗಲಿದೆ. ಅದರ ಬಲದಾಗಿ ಕೇವಲ ಹೆಚ್ಚುವರಿ ಬಡ್ತಿಯಾಗಿ ಪರಿಗಣಿಸಿದಾಗ ಹೆಚ್ಚುವರಿ ಬಡ್ತಿಗೆ ನಿಗದಿ ಮಾಡಿರುವ ಹಣ ಮಾತ್ರ ಶಿಕ್ಷಕರಿಗೆ ಸಿಗಲಿದೆ. ಹೀಗಾಗಿ ಮೂಲ ವೇತನದೊಂದಿಗೆ ಸೇರಿಸಿ ನೀಡಿರುವ ಹೆಚ್ಚುವರಿ ಅನುದಾನ ವಾಪಸ್ ಪಡೆಯುವುದು ಸರ್ಕಾರದ ಉದ್ದೇಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net