

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯಲಿರುವ ಕಾರಣ ಗುರುವಾರದಿಂದ ಮೂರು ದಿನ ಆರೆಂಜ್ ಅಲರ್ಟ್‌ಅನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗಲಿದೆ. ಅದರಲ್ಲೂ ಘಟ್ಟ ಪ್ರದೆಶಗಳಲ್ಲಿ ವ್ಯಾಪಕ ವರ್ಷಧಾರೆಯಾಗಲಿದೆ. ಮಲೆನಾಡು ಜಿಲ್ಲೆಗಳಲ್ಲೂ ಮಳೆ ತುಸು ಇಳಕೆಯಾಗಿದ್ದು, ಅಲ್ಲಲ್ಲಿ ಮಳೆಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ವರ್ಷಧಾರೆ ಮುಂದುವರಿಯಲಿದೆ.
ದಕ್ಷಿಣ ಒಳನಾಡು ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಶನಿವಾರದವರೆಗೆ ಸಾಧಾರಣ ಪ್ರಮಾಣದ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಮಳೆ ಕ್ಷೀಣವಾಗಿದ್ದರೂ, ಪ್ರವಾಹ ಮಾತ್ರ ನಿಂತಿಲ್ಲ. ಮಹಾರಾಷ್ಟ್ರದಿಂದ ಹೆಚ್ಚು ನೀರು ರಾಜ್ಯಕ್ಕೆ ಹರಿದುಬರುತ್ತಿರುವ ಕಾರಣ ಕೃಷ್ಣಾ ಕಣಿವೆಯ ಹಲವೆಡೆ ಸೇತುವೆಗಳು ಮುಳುಗಿವೆ. ಬಾಂದಾರ, ಚೆಕ್‌ಡ್ಯಾಂ ನೀರಿನಿಂದ ತುಂಬಿದ್ದು, ಅಲ್ಲಲ್ಲಿ ರೈತರ ಜಮೀನಿನಲ್ಲಿ ನೀರು ನಿಂತು ಸಮಸ್ಯೆ ಸೃಷ್ಟಿಯಾಗಿದೆ.
ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಶನಿವಾರದವರೆಗೆ ಸಾಧಾರಣ ಪ್ರಮಾಣದ ಮಳೆಯಾಗಲಿದೆ. ವೇಗದ ಗಾಳಿಯೂ ಬೀಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈನಲ್ಲಿ ಶೇ.29 ಅಧಿಕ ಮಳೆ:
ರಾಜ್ಯದಲ್ಲಿ ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಶೇ.29 ಅಧಿಕ ಪ್ರಮಾಣದ ಮಳೆ ಬಿದ್ದಿದೆ. ಸರಾಸರಿ 453.1 ಮಿ.ಮೀ.ಗೆ ಎದುರಾಗಿ 586.4 ಮಿ.ಮೀ. ವರ್ಷಧಾರೆಯಾಗಿದೆ. ಕರಾವಳಿ ವ್ಯಾಪ್ತಿಯಲ್ಲಿ 1,952.5 ಮಿ.ಮೀ. ಎದುರಾಗಿ 2,556.4 ಮಿ.ಮೀ. ಪ್ರಮಾಣದ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.32 ಅಧಿಕ ಮಳೆ ಬಿದ್ದಿದ್ದು, 350.3 ಮಿ.ಮೀ. ಎದುರಾಗಿ 462.2 ಮಿ.ಮೀ. ಆಗಿದೆ. ಉತ್ತರ ಒಳನಾಡು ವ್ಯಾಪ್ತಿಯಲ್ಲಿ 221.8 ಮಿ.ಮೀ.ಗೆ ಎದುರಾಗಿ 272 ಮಿ.ಮೀ. (ಶೇ.23 ಅಧಿಕ) ವರ್ಷಧಾರೆಯಾಗಿದೆ ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.