

ಆಲೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಚೌಲ್ಗೆರೆ ಗ್ರಾಮದ ಬಳಿ ಟೋಲ್ ವಸೂಲಿ ಹಾಗೂ ಅಪೂರ್ಣ ಕಾಮಗಾರಿ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯರಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಬೆಳಗ್ಗೆ 8 ಗಂಟೆಯಿಂದಲೇ ಟೋಲ್‌ನಲ್ಲಿ ವಾಹನಗಳಿಗೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ್ ಗೌಡ ಬಣ) ತಾಲೂಕು ಅಧ್ಯಕ್ಷ ನಟರಾಜ್ ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಎಚ್.ವಿ.ರಾಘವೇಂದ್ರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಚೌಲ್ಗೆರೆ ಬಿಳಿಯಿರುವ ರಸ್ತೆ ಸಂಚಾರ ತಡೆದು ಟೋಲ್ ಬಳಿ ವಾಹನಗಳಿಂದ ಹಣ ಸಂಗ್ರಹಿಸದಂತೆ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು.
ಕರವೇ ತಾಲೂಕು ಅಧ್ಯಕ್ಷ ನಟರಾಜ್ ಮಾತನಾಡಿ, ನಿಯಮದಂತೆ ಪ್ರತಿ 50 ರಿಂದ 60 ಕಿ.ಮೀ. ಅಂತರದಲ್ಲಿ ಟೋಲ್ ಸಂಗ್ರಹ ಕೇಂದ್ರವಿರಬೇಕು. ಆದರೆ ಶಾಂತಿಗ್ರಾಮ ಟೋಲ್ ಸಂಗ್ರಹ ಕೇಂದ್ರಕ್ಕೂ ಆಲೂರು ತಾಲೂಕಿನ ಚೌಳಗೆರೆ ಬಳಿಯ ಟೋಲ್ ಸಂಗ್ರಹ ಕೇಂದ್ರಕ್ಕೂ ಕೇವಲ 30 ಕಿ.ಮೀ. ಅಂತರವಿದೆ. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿಯಮ ಮೀರಿ ಟೋಲ್ ನಿರ್ಮಾಣ ಮಾಡುವ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಾಘವೇಂದ್ರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಎಂದರೆ ಅದರಲ್ಲಿ ಸುಗಮ ಸಂಚಾರಕ್ಕೆ ಅವಕಾಶವಿರಬೇಕು. ಯಾರು ಕೂಡ ರಸ್ತೆ ದಾಟಿ ಹೋಗಬಾರದು. ರಸ್ತೆ ದಾಟಲು ಅಂಡರ್ ಪಾಸ್ ವ್ಯವಸ್ಥೆ ಮಾಡಬೇಕು. ಟೋಲ್ ಅನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ರಸ್ತೆ ಬದಿ ಕುಡಿಯುವ ನೀರು, ಶೌಚಗೃಗಹ, ವಿಶ್ರಾಂತಿ ಕೊಠಡಿಯಿರಬೇಕು. ಬಸ್ ಸಂಚಾರಕ್ಕೆ ಸರ್ವೀಸ್ ರಸ್ತೆ ಪ್ರತ್ಯೇಕವಾಗಿರಬೇಕು. ಇದ್ಯಾವ ವ್ಯವಸ್ಥೆಗಳನ್ನೂ ಮಾಡದೇ ಸರ್ಕಾರ ಯಾವ ಮಾನದಂಡದ ಮೇಲೆ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಿರುವುದು ಅನ್ಯಾಯ. ಈ ಸಮಸ್ಯೆ ಇತ್ಯರ್ಥ ಮಾಡದೇ ಸುಂಕ ವಸೂಲಾತಿಗೆ ಮುಂದಾದರೆ ಇದರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಸಕಲೇಶಪುರ ಉಪ-ವಿಭಾಗಾಧಿಕಾರಿ ಶೃತಿ ಹಾಗೂ ಹಾಸನ ಜಿಲ್ಲಾ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಆಲೂರು ತಾಲೂಕು ತಹಸೀಲ್ದಾರ್ ನಂದಕುಮಾರ್ ಧರಣಿ ನಿಲ್ಲಿಸುವಂತೆ ಪ್ರತಿಭಟನಾಕಾರರ ಮನವೊಲಿಸಿದರು.
ಈ ವೇಳೆ ಮುಖಂಡರಾದ ಸತೀಶ್ ಪಾಟೀಲ್, ರಘು ಪಾಳ್ಯ ಮಾತನಾಡಿ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾರೊಬ್ಬರಿಗೂ ಮಾಹಿತಿ ನೀಡದೆ ಟೋಲ್ ಸಂಗ್ರಹ ಮಾಡಲು ಮುಂದಾಗಿರುವುದು ಕಾನೂನು ವಿರೋಧಿ ಕ್ರಮವಾಗಿ ಎಂದು ಕಿಡಿಕಾರಿದರು.
ಎಸಿ ಶೃತಿ ಮಾತನಾಡಿ, ಸುಂಕ ವಸೂಲಿ ಸೋಮವಾರ ಆರಂಭವಾಗಲಿದೆ. ಮಂಗಳವಾರ ಸಭೆ ನಡೆಯುವವರೆಗೂ ಸ್ಥಳೀಯರಿಂದ ಸುಂಕ ವಸೂಲಿ ಮಾಡಲ್ಲ. ನಾಳೆ ಬೆಳಗ್ಗೆ 11 ಗಂಟೆಗೆ ಹಾಸನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಯೋಜನಾ ನಿರ್ದೇಶಕರು, ಸ್ಥಳೀಯರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಬಗ್ಗೆ ತಿಳಿಸಲಾಗುವುದು. ಮುಂದಿನ ನಿರ್ಧಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರ ಮನವೊಲಿಸಿದರು. ಇದಕೆ ಪಿಡಿಒ ಪ್ರವೀಣ್‌ಕುಮಾರ್ ಸಾಥ್ ನೀಡಿದರು. ಇದಕ್ಕೆ ಸ್ಪಂದಿಸಿದ ಪ್ರತಿಭಟನಾನಿರತರು ಧರಣಿ ಸ್ಥಗಿತಗೊಳಿಸಿದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಸತೀಶ್ ಪಟೇಲ್, ಸುಧಾ, ಲತಾ, ಗೀರಿಶ್,ಮಧು, ವೆಂಕಟೇಶ್, ಜೆಸಿಬಿ ಮಂಜು, ದಿನೇಶ್, ಸತೀಶ್, ಜ್ಞಾನೇಶ್, ಅರುಣ, ಭಾಸ್ಕರ್, ಶಶಿ, ಕರವೇ ಆಲೂರು ತಾಲೂಕು ಅಧ್ಯಕ್ಷ ಎಚ್.ವಿ ರಾಘವೇಂದ್ರ, ಸಕಲೇಶಪುರ ತಾಲೂಕು ಅಧ್ಯಕ್ಷ ರಮೇಶ್ ಪೂಜಾರ್, ಬೇಲೂರು ತಾಲೂಕು ಅಧ್ಯಕ್ಷ ಭೋಜೇಗೌಡ, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಪ್ರಕಾಶ್ , ಜೈ ಭೀಮ್ ಆರ್ಮಿಯ ಜಗ್ಗಿ, ಗಣೇಶ್ ಸಂಜು, ಅಶೋಕ, ರಾಕಿ, ಭಾರ್ಗವ, ಲತೇಶ್, ಹರೀಶ್, ಕರವೇ ನಾರಾಯಣ್ ಗೌಡ ಬಣದ ತಾಲೂಕು ಉಪಾಧ್ಯಕ್ಷ ನವೀನ್ ಬೈರಾಪುರ ಇತರರು ಇದ್ದರು.