

ಸಾಗರ: ಪರಿಸರಕ್ಕೆ ಮಾರಕ, ಜನ ಮತ್ತು ಜೀವವೈವಿಧ್ಯತೆಗೆ ಧಕ್ಕೆ ತರುವ ಶರಾವತಿ ಭೂಗತ ಯೋಜನೆಗೆ ನಮ್ಮ ವಿರೋಧವಿದೆ ಎಂದು ತಾಲೂಕಿನ ಅರಲಗೋಡು ಗ್ರಾಮ ಪಂಚಾಯಿತಿ ಜೀವವೈವಿಧ್ಯ ಸಮಿತಿ ನಿರ್ಣಯ ಕೈಗೊಂಡಿದೆ.
ಜೀವವೈವಿಧ್ಯ ಸಮಿತಿ ಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಕುರಿತು ಪರಿಸರವಾದಿಗಳ ಸಮ್ಮುಖದಲ್ಲಿ ವ್ಯಾಪಕ ಚರ್ಚೆ ನಡೆದು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮಾತನಾಡಿ, ಭೀಕರವಾದ ಮಂಗನ ಕಾಯಿಲೆ ಈ ಭಾಗವನ್ನು ತಲ್ಲಣಗೊಳಿಸಿದೆ. ಈವರೆಗೆ ಸೂತಕದ ಛಾಯೆ ಮರೆಯಾಗಿಲ್ಲ. ಈ ನಡುವೆ ಇನ್ನೊಂದು ಪ್ರಹಾರ ಮಾಡಲು ಸರ್ಕಾರ ಮುಂದಾಗಿದೆ. ಮಂಗನ ಕಾಯಿಲೆ ತಡೆಗೆ ಲಸಿಕೆ ಸಂಶೋಧನೆ ಮಾಡಿಲ್ಲ. ಕಾಡಿನ ಪ್ರದೇಶದ ಜನತೆಗೆ ಈ ಲಸಿಕೆ ಶೀಘ್ರ ಲಭ್ಯವಾಗುವಂತೆ ಮಾಡಲಿ ಎಂದು ಒತ್ತಾಯಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆ ಜನರ ಜೀವನಕ್ಕೆ ಮಾರಕವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿದ ವಿಜ್ಞಾನಿಗಳೇ ತಿಳಿಸಿದ್ದಾರೆ. ಅರಲಗೋಡು ಗ್ರಾಪಂ ಈ ಯೋಜನೆಯನ್ನು ವಿರೋಧಿಸುತ್ತಿದೆ. ಕೂಡಲೇ ಯೋಜನೆಯನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮಾಜಿ ಸದಸ್ಯಕೆ.ವೆಂಕಟೇಶ್, ಆನೆಗೊಳಿ ಸುಬ್ರಾವ್, ಶ್ರೀಪಾದ ಬಿಚ್ಚುಗತ್ತಿ, ಸ್ಥಳೀಯರಾದ ವಹಾಬಲಗಿರಿ, ರಾಜೇಶ್ ಇತರರಿದ್ದರು.