

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕಾರ್ಯಗತಗೊಳಿಸಿಯೇ ಸಿದ್ಧ ಎಂದು ರಾಜ್ಯ ಸರ್ಕಾರ ಟೊಂಕಕಟ್ಟಿ ನಿಂತಿದೆ. ಇನ್ನೊಂದೆಡೆ ಯೋಜನೆಗೆ ಪರಿಸರಾಸಕ್ತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಶಿವಮೊಗ್ಗದಲ್ಲಿ ಪರ್ಯಾವರಣ ಟ್ರಸ್ಟ್, ನಿರ್ಮಲ ತುಂಗಭದ್ರಾ ಅಭಿಯಾನ ಮತ್ತಿತರ ಸಂಘಟನೆಗಳು ವಿಚಾರ ಸಂಕಿರಣ ನಡೆಸಿ ಯೋಜನೆಯನ್ನು ವಿರೋಧಿಸಿವೆ.
ಸಾಗರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಇದರ ನಡುವೆ ಸೆ.16ರಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕಾರ್ಗಲ್‌ನಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಹಾಗೂ ಪರಿಸರಾಸಕ್ತರ ಅಹವಾಲು ಕೇಳುವ ಮುನ್ನವೇ ವೃಕ್ಷಲಕ್ಷ ಆಂದೋಲನದ ಪ್ರಮುಖರು ಪಂಪ್ಡ್ ಸ್ಟೋರೇಜ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿ ಯೋಜನೆಯ ಅನುಷ್ಠಾನಕ್ಕೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ. ವಾಮನ ಆಚಾರ್ಯ, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಡಾ. ವೈ.ಬಿ.ರಾಮಕೃಷ್ಣ, ರಾಜ್ಯ ಭೂಕುಸಿತ ಅಧ್ಯಯನ ಸಮಿತಿ ಸಂಚಾಲಕ ಡಾ. ಕೇಶವ ಎಚ್. ಕೂರ್ಸೆ, ವಿಧಾನ ಪರಿಷತ್ ಮಾಜಿ ಸದಸ್ಯ ಶಾಂತಾರಾಮ ಸಿದ್ದಿ ಮುಂತಾದವರು ಪಂಪ್ಡ್ ಸ್ಟೋರೇಜ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಶ್ಚಿಮಘಟ್ಟದ ಜನತೆಯ ಸುಸ್ಥಿರ ಅಭಿವೃದ್ಧಿಯು ಸಹ್ಯಾದ್ರಿ ಪರ್ವತ ಶ್ರೇಣಿಯ ಉಳಿವಿನ ಜತೆ ಹಾಸುಹೊಕ್ಕಾಗಿದೆ. ಬೃಹತ್ ಯೋಜನೆಗಳನ್ನು ಮಲೆನಾಡಿನ ಜನತೆ, ಪರಿಸರದ ಮೇಲೆ ಅತಿಯಾಗಿ ಹೇರುತ್ತಲೇ ಇರುವ ರಾಜ್ಯ ಹಾಗೂ ಕೇಂದ್ರ ಸರ್ಕಾರ ತೋರಿಕೆಗೆ ಅಹವಾಲು ಸಭೆ ನಡೆಸುತ್ತಿವೆ. ಜನರು, ವಿಜ್ಞಾನಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆಯಲು ಸರ್ಕಾರ ಈಗ ಅನುಸರಿಸುವ ಮಾನದಂಡಗಳು, ನಿಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕಂತೆ ಇಲ್ಲ ಎಂದು ದೂರಿದ್ದಾರೆ.