

ಶಿವಮೊಗ್ಗ: ವೈಜ್ಞಾನಿಕ ಜನಗಣತಿ ನಡೆಯದ ಹೊರತು ಒಳಮೀಸಲಾತಿ ಜಾರಿಗೊಳಿಸಬಾರದು. ಒಂದು ವೇಳೆ ಈ ಪರಿಸ್ಥಿತಿಯಲ್ಲೇ ಒಳಮೀಸಲಾತಿ ಜಾರಿ ಮಾಡಿದರೆ ಇರುವ ವ್ಯವಸ್ಥೆಯನ್ನು ಹಾಳುಮಾಡಿದಂತಾಗುತ್ತದೆ ಎಂದು ಗೋರ ಸೇನಾ ಮುಖಂಡ ಶಶಿಕುಮಾರ್ ಒತ್ತಾಯಿಸಿದರು.
ಬಂಜಾರ ಸಮುದಾಯದ ಬಗ್ಗೆ ಸಂಪೂರ್ಣ ದತ್ತಾಂಶವೂ ಸರ್ಕಾರದ ಬಳಿಯಿಲ್ಲ. ಇದಕ್ಕಾಗಿ ಕುಲಶಾಸ್ತ್ರೀಯ ಅಧ್ಯಯನ ಮಾಡಿ, ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಬೇಕಾಗುತ್ತದೆ. ಶೈಕ್ಷಣಿಕ, ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಸ್ಥಾನಮಾನವನ್ನು ಅಧ್ಯಯನ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಗೋರ ಸೇನಾ ಜಿಲ್ಲಾಧ್ಯಕ್ಷ ಜಿ.ಚಂದ್ರನಾಯ್ಕ ಮಾತನಾಡಿ, ಈಗಾಗಲೇ ಲಂಬಾಣಿ ಸಮುದಾಯ ಹೆಚ್ಚಾಗಿರುವ ರಾಜ್ಯದ 20 ಜಿಲ್ಲೆಗಳಲ್ಲಿ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದು, ಇವುಗಳ ಪೈಕಿ 8 ತಾಲೂಕುಗಳಿಂದ ಮಾತ್ರ ಉತ್ತರ ಸಿಕ್ಕಿದೆ. ಇನ್ನುಳಿದ ಯಾವ ತಾಲೂಕುಗಳಲ್ಲಿಯೂ ಜಾತಿ ಗಣತಿ ಮತ್ತು ತಾಂಡಾಗಳ ಸಂಖ್ಯೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬ ಉತ್ತರ ಸಿಕ್ಕಿದೆ. ಹೀಗಾಗಿ ನಮ್ಮ ಸಂಘಟನೆ ಒಳ ಮೀಸಲಾತಿ ಜಾರಿಯಾಗುವುದನ್ನು ವಿರೋಧಿಸುತ್ತದೆ ಎಂದು ಹೇಳಿದರು.
ಪ್ರಮುಖರಾದ ರಾಜೇಶ್ ದುಮ್ಮಳ್ಳಿ, ರೇಣುಕನಾಯ್ಕ, ಸಂತೋಷ್‌ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.