ವೈಟ್‌ಬೋರ್ಡ್ ವಾಹನಗಳ ಬಾಡಿಗೆಗೆ ವಿರೋಧ

taxi
ವೈಟ್‌ಬೋರ್ಡ್ ವಾಹನಗಳನ್ನು ಬಾಡಿಗೆಗೆ ಒದಗಿಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರ ಮತ್ತು ಚಾಲಕರ ಸಂಘದ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕೋದಂಡ, ಮಂಜು, ಸಿ.ದೊರೆ, ಶಿವು, ಕಾರ್ತೀಕ್ ಶೆಟ್ಟಿ ಮುಂತಾದವರಿದ್ದರು.
Published on

ಶಿವಮೊಗ್ಗ: ವೈಟ್‌ಬೋರ್ಡ್ ವಾಹನಗಳನ್ನು ಬಾಡಿಗೆಗೆ ಒದಗಿಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಿವಮೊಗ್ಗ ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರ ಮತ್ತು ಚಾಲಕರ ಸಂಘದ ಪ್ರಮುಖರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎಐಟಿಪಿ ಕಾಯ್ದೆಗೆ ನಮ್ಮ ವಿರೋಧವಿಲ್ಲ. ಆದರೆ ರಾಜ್ಯದಲ್ಲಿ ಈ ಕಾನೂನನ್ನು ಕೆಲವರು ಉಲ್ಲಂಘನೆ ಮಾಡುತ್ತಿದ್ದಾರೆ. ಹೊರ ರಾಜ್ಯದಲ್ಲಿ ನೋಂದಣಿ ಶುಲ್ಕ ಕಡಿಮೆ ಇರುವ ಕಾರಣ ಅಲ್ಲಿ ವಾಹನ ನೋಂದಾಯಿಸಿಕೊಂಡು ಕರ್ನಾಟಕದಲ್ಲಿ ಬಾಡಿಗೆ ಸೇವೆ ನೀಡುತ್ತಿದ್ದಾರೆ. ಎಐಟಿಪಿ ಕಾನೂನುಗಳನ್ನು ಇವರು ಪಾಲಿಸುತ್ತಿಲ್ಲ. ಸೀಟಿಂಗ್ ಲೇಔಟ್ 2+2 ಇರಬೇಕು. ಆದರೆ 3+2 49 ಆಸನಗಳನ್ನು ಮಾಡಿರುತ್ತಾರೆ. ಅಲ್ಲದೆ ಗ್ರಾಹಕರು ಮತ್ತು ಚಾಲಕರು ಅದೇ ರಾಜ್ಯದವರಾಗಿರಬೇಕೆಂಬ ನಿಯಮವಿದೆ. ಆದರೆ ಅದು ಇಲ್ಲಿ ಪಾಲನೆ ಆಗುತ್ತಿಲ್ಲ. ಇದರಿಂದ ಕೆಲ ಮಾಲೀಕರಿಗೆ ಕಷ್ಟವಾಗುತ್ತಿದೆ ಎಂದು ದೂರಿದರು.

ಯಾವುದೇ ವಾಹನ 90 ದಿನದೊಳಗೆ, ಎಐಟಿಪಿ ವಾಹನ 45 ದಿನದೊಳಗೆ ಅವರ ರಾಜ್ಯಗಳಿಗೆ ಮರಳಬೇಕು. ಆದರೆ ಬೇರೆ ರಾಜ್ಯಗಳಿಂದ ಬಂದವರು ಹಿಂದಕ್ಕೆ ಹೋಗುತ್ತಿಲ್ಲ. ಅವರ ಫಾಸ್ಟ್‌ಟ್ಯಾಗ್ ಜಿಪಿಎಸ್ ಮತ್ತು ಡಿಸೇಲ್ ಬಿಲ್ ಗಮನಿಸಿದರೆ ಇದು ಬಹಿರಂಗವಾಗುತ್ತದೆ. ಪ್ರಯಾಣದ ಮುಂಚಿತವಾಗಿ ಗ್ರಾಹಕರ ಲೀಸ್ಟ್ ಮತ್ತು ಆಧಾರ್‌ನ್ನು ವಾಹನ್ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಅದು ಪಾಲನೆಯಾಗುತ್ತಿಲ್ಲ. ಇದನ್ನು ಪರಿಶೀಲಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ 49 ಸೀಟಿನ ಬಸ್ಸಿಗೆ 82,500 ರೂ. ತೆರಿಗೆ ಪಾವತಿಸಬೇಕು. ತಮಿಳುನಾಡಿಗೆ 40 ಸಾವಿರ, ಕೇರಳ 18, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ತಲಾ 12 ಸಾವಿರ ರೂ. ಪಾವತಿಸಬೇಕು. ಹಲವು ಬಾರಿ ಆರ್‌ಟಿಓ ಕಚೇರಿಗೆ ಮನವಿ ಸಲ್ಲಿಸಿದ್ದರೂ ಸಾರಿಗೆ ಇಲಾಖೆಯವರು ಕ್ರಮ ಕೈಗೊಂಡಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದಾರೆ. ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ಮೂರು ತಿಂಗಳಿಗೆ 1,667 ಕೋಟಿಯಷ್ಟು ನಷ್ಟವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕ್ಯಾಬ್ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಕೋದಂಡ, ಪ್ರಮುಖರಾದ ಸಿ.ದೊರೆ, ಮಂಜು, ದಿನೇಶ್, ಗಿರೀಶ್, ಶಿವು, ಕಾರ್ತೀಕ್ ಶೆಟ್ಟಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net