

ಸಾಗರ: ಈಸೂರಿನಿಂದ ಅಂಜನಾಪುರ ಕೆಇಬಿ ಗ್ರಿಡ್‌ವರೆಗೆ ಅವೈಜ್ಞಾನಿಕವಾಗಿ ಜಮೀನಿನ ಮೇಲೆ ಹೈಟೆನ್ಷನ್ ವಿದ್ಯುತ್ ಮಾರ್ಗ ಒಯ್ಯುತ್ತಿರುವುದನ್ನು ಖಂಡಿಸಿ ಶಿಕಾರಿಪುರ ತಾಲೂಕು ಈಸೂರು ಗ್ರಾಮದ ರೈತರು ಸಾಗರ ಉಪವಿಭಾಗಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.
ಈಸೂರು ಗ್ರಾಮದಿಂದ ಅಂಜನಾಪುರ ಮತ್ತು ಕೊರಲಹಳ್ಳಿ ಗ್ರಾಮದ ಗ್ರಿಡ್‌ಗೆ ನಮ್ಮ ಜಮೀನುಗಳಲ್ಲಿ ಕೆಪಿಟಿಸಿಎಲ್ ಅವೈಜ್ಞಾನಿಕವಾಗಿ ಗೋಪುರ ವಿದ್ಯುತ್ ಮಾರ್ಗವನ್ನು ಅಳವಡಿಸುತ್ತಿದೆ. ಅವೈಜ್ಞಾನಿಕವಾಗಿ ಗ್ರಿಡ್ ಅಳವಡಿಕೆ ನೀಲಿನಕ್ಷೆ ತಯಾರಿಸಲಾಗಿದೆ ಎಂದು ಆರೋಪಿಸಿದರು.
ಉದ್ದೇಶಿತ ಮಾರ್ಗದಲ್ಲಿ ರೈತರು ದೀರ್ಘಕಾಲದ ಬೆಳೆಗಳಾದ ಅಡಕೆ, ಬಾಳೆ, ತೆಂಗು ಮತ್ತಿತರ ಬೆಳೆ ಬೆಳೆಯುತ್ತಿದ್ದು, ಇದನ್ನೇ ಅವಲಂಬಿಸಿದ್ದಾರೆ. ಕಡಿಮೆ ಅಂತರದಲ್ಲಿ ಟವರ್ ಅಳವಡಿಕೆ ಸಾಧ್ಯತೆ ಇದ್ದಾಗ್ಯೂ ಹೆಚ್ಚು ದೂರದಲ್ಲಿ ಹೆಚ್ಚಿನ ಸಂಖ್ಯೆಯ ಟವರ್‌ಗಳನ್ನು ಅಳವಡಿಸಲು ಮುಂದಾಗಿರುವುದರಿಂದ ಸರ್ಕಾರಕ್ಕೆ ಹೆಚ್ಚು ನಷ್ಟವಾಗುತ್ತದೆ. ಇದರ ನಡುವೆ ರೈತರಿಗೆ ಕೆಪಿಟಿಸಿಎಲ್ ಅಧಿಕಾರಿಗಳು ಕಾನೂನು ಕ್ರಮದ ಎಚ್ಚರಿಕೆ ನೀಡುತ್ತಿರುವುದು ಖಂಡನೀಯ. ಒತ್ತಾಯಪೂರ್ವಕವಾಗಿ ಟವರ್ ನಿರ್ಮಿಸಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ತಕ್ಷಣ ಉಪವಿಭಾಗಾಧಿಕಾರಿಗಳು ಸ್ಥಳೀಯ ರೈತರ ಹಿತವನ್ನು ಪರಿಗಣಿಸಿ ಅವೈಜ್ಞಾನಿಕವಾಗಿ ತಯಾರಿಸಿರುವ ನೀಲಿನಕ್ಷೆಯನ್ನು ರದ್ದುಗೊಳಿಸಿ ಹೊಸ ಮಾರ್ಗ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಂತೋಷಕುಮಾರ್ ಈಸೂರು, ಬೇಗೂರು ಶಿವಪ್ಪ, ಕಾರ್ತಿಕ್, ಸುಭಾಶ್ಚಂದ್ರ, ರಾಮಣ್ಣ, ಶೇಖರ್ ಇತರರಿದ್ದರು.