

ಸಿದ್ದಾಪುರ ; ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ವಿರೋಧ ವ್ಯಕ್ತಪಡಿಸಿ ಮಾಲ್ದಾರೆ ಗ್ರಾಮ ಪಂಚಾಯಿತಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಬುಧವಾರವೂ ಮುಂದುವರಿದಿದ್ದು, ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಮಾಲ್ದಾರೆಯಲ್ಲಿ ಬಹುಜನ ಸಮಾಜ ಪಾರ್ಟಿ, ರೈತ ಸಂಘಟನೆ, ಹಾಗೂ ವಿವಿಧ ಮಹಿಳಾ ಸಂಘಟನೆಗಳು ಬುಧವಾರ ಅರ್ಧ ಗಂಟೆ ರಸ್ತೆ ಸಂಚಾರ ತಡೆ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.
ಬಹುಜನ ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಮಾತನಾಡಿ, ಹೋರಾಟದ ಸ್ಥಳಕ್ಕೆ ಇದುವರೆಗೂ ಯಾವುದೇ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುತ್ತಿಲ್ಲ. ಇದು ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟ ನಡೆಸಲಾಗುವುದು ಹಾಗೂ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಮೈಸೂರು ಹಾಗೂ ಸಿದ್ದಾಪುರ ಮಾರ್ಗದ ಮಾಲ್ತಾರೆ ಮುಖ್ಯ ರಸ್ತೆಯಲ್ಲಿ ಕೆಲಕಾಲ ರಸ್ತೆ ಸಂಚಾರ ತಡೆ ನಡೆಸಿ ನಂತರ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ಅಧಿಕಾರಿಗಳು ಹಾಗೂ ಆಡಳಿತದ ವ್ಯವಸ್ಥೆಯ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ರೈತ ಸಂಘದ ಪ್ರಮುಖರಾದ ಸುಜಯ್ ಬೋಪಯ್ಯ, ಸುಭಾಷ್, ಸುಬ್ಬಯ್ಯ, ಸಬಿತಾ ಭೀಮಯ್ಯ, ಫ್ಯಾನ್ಸಿ, ಕರಂಬಯ್ಯ, ಭೀಮಪುತ್ರಿ ಬ್ರಿಗೇಡ್ ಸಂಘಟನೆಯ ರಾಜ್ಯಾಧ್ಯಕ್ಷೆ ರೇವತಿ ರಾಜ್, ಬಹುಜನ ಭಾಗ್ಯ ವಿಧಾತ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷ ಚೇತನ್ ಕುಮಾರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಹೋರಾಟಕ್ಕೆ ಬೆಂಬಲ ಸೂಚಿಸಿದರು.