ಗಾಂಧೀಜಿ ಬಗ್ಗೆ ಭಾರತದಲ್ಲೇ ವಿರೋಧ!

sahyadri
ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳು ಹಾಗೂ ಸಾಂಸ್ಕೃತಿಕ ಕಲಾ ಪರಿಷತ್‌ನಿಂದ ಏರ್ಪಡಿಸಿದ್ದ ಗಾಂಧಿ ಜಯಂತಿಯನ್ನು ಉಮಾಶಂಕರ್ ಉದ್ಘಾಟಿಸಿದರು. ಡಾ.ಪ್ರಸನ್ನಕುಮಾರ್, ಡಾ.ಎಚ್.ಪಿ.ಮಂಜುನಾಥ್, ಡಾ.ಎಂ.ಎಚ್.ಪ್ರಾಹ್ಲಾದಪ್ಪ, ಡಾ.ಎನ್.ಹಾಲಮ್ಮ, ಡಾ.ಕೆ.ಎನ್.ಮಂಜುನಾಥ್ ಮುಂತಾದವರಿದ್ದರು.
Published on

ಶಿವಮೊಗ್ಗ: ಜಗತ್ತೇ ಮೆಚ್ಚಿರುವ ಗಾಂಧೀಜಿ ಅವರನ್ನು ಭಾರತದಲ್ಲಿ ವಿರೋಧಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಉಮಾಶಂಕರ್ ಕಳವಳ ವ್ಯಕ್ತಪಡಿಸಿದರು.

ಸಹ್ಯಾದ್ರಿ ಕಲಾ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳು ಹಾಗೂ ಸಾಂಸ್ಕೃತಿಕ ಕಲಾ ಪರಿಷತ್‌ನಿಂದ ಏರ್ಪಡಿಸಿದ್ದ ಗಾಂಧಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಗಾಂಧಿ ಜಯಂತಿ ಯಾಂತ್ರಿಕವಾಗುತ್ತಿದೆ. ಕೆಲವು ವರ್ಗ ಅವರನ್ನು ವಿರೋಧಿಸುತ್ತಿದೆ. ವಿರೋಧಿಸಿದರೆ ಅಡ್ಡಿ ಇಲ್ಲ, ದ್ವೇಷಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗಾಂಧೀಜಿ ಅವರನ್ನು ಓದಿಕೊಳ್ಳದೇ ಅವರ ವಿರುದ್ಧ ಯಾವುದೇ ತೀರ್ಮಾನಗಳನ್ನು ಕೈಗೊಳ್ಳಬಾರದು. ವೃತ್ತದೊಳಗೆ ಇಟ್ಟಿರುವ ಅವರನ್ನು ಸುರುಳಿಯಾಗಿ ಬಿಚ್ಚಿಸಿಕೊಳ್ಳಬೇಕು. ಜಗತ್ತಿಗೇ ಅವರು ಇಷ್ಟವಾಗಿದ್ದಾರೆ. ಕೆಲವರಿಗೇ ಅದೇಕೆ ಇಷ್ಟವಾಗುತ್ತಿಲ್ಲವೋ ಗೊತ್ತಿಲ್ಲ. ವಿನಾಕಾರಣ ಅವರ ಮೇಲೆ ದೇಶ ವಿಭಜನೆಯ ಆರೋಪ ಹೊರಿಸಲಾಗುತ್ತಿದೆ ಎಂದು ಹೇಳಿದರು.

ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ.ಎಂ.ಎಚ್.ಪ್ರಹ್ಲಾದಪ್ಪ ಮಾತನಾಡಿ, ಗಾಂಧೀಜಿ ಅವರ ಜೀವನ ಕ್ರಮವೇ ಒಂದು ಸಂದೇಶ. ಗಾಂಧೀಜಿ, ಅಂಬೇಡ್ಕರ್ ಇಲ್ಲದ ಸ್ವಾತಂತ್ರೃದ ಚರಿತ್ರೆ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ. ಹಿಂಸೆಯೇ ವಿಜೃಂಭಿಸುತ್ತಿರುವ ಈ ಕಾಲದಲ್ಲಿ, ಯುದ್ಧಗಳನ್ನು ಆಹ್ವಾನಿಸುವ ಇಂದಿನ ತಲ್ಲಣಗಳಲ್ಲಿ ಗಾಂಧೀಜಿ ಅವರ ಅಹಿಂಸೆಯ ಮಾರ್ಗ ತೀರಾ ಅವಶ್ಯಕ ಎಂದರು.

ಗಾಂಧೀಜಿ ಕುರಿತು ಪ್ರಾಧ್ಯಾಪಕ ಡಾ.ಪ್ರಸನ್ನಕುಮಾರ್ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್. ಮಂಜುನಾಥ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಎನ್.ಹಾಲಮ್ಮ , ಡಾ.ಬಿ.ಎನ್.ಚಂದ್ರಶೇಖರ್, ಡಾ.ಮಹದೇವಸ್ವಾಮಿ, ಡಾ. ಚಂದ್ರಪ್ಪ, ಶಫೀವುಲ್ಲಾ, ಶಂಭುಲಿಂಗಮೂರ್ತಿ, ಡಾ.ಎಚ್.ಪಿ.ಮಂಜುನಾಥ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net