

ಬೆಂಗಳೂರು: ಕೇಂದ್ರದ ಪ್ರಸ್ತಾವಿತ ಬೀಜ ಮಸೂದೆ-2019 ಅನ್ನು ರೈತರು ತೀವ್ರವಾಗಿ ವಿರೋಧಿಸಿದ್ದು, ಕಾಯ್ದೆಯಾಗಿ ಪರಿವರ್ತಿಸಿ ಜಾರಿ ಮಾಡದಂತೆ ಕೇಂದ್ರಕ್ಕೆ ಒತ್ತಾಯಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಡ ಹೇರಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರೈತ ಸಂಘಟನೆಗಳ ಮುಖಂಡರು ಈ ವಿಷಯ ಪ್ರಸ್ತಾಪಿಸಿ, ಬೀಜ ಮಸೂದೆಯು ರೈತರ ಹಿತ, ಜೀವವೈವಿಧ್ಯ ರಕ್ಷಿಸುವ ಬದಲಿಗೆ ಬೀಜ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿದೆ. ಖಾಸಗಿ ಕಂಪನಿಗಳ ಏಕಸ್ವಾಮ್ಯತೆ ಸಾಧಿಸಲಿದ್ದು, ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಮಾಡಿಕೊಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಬ್ಬು ಪೂರೈಸಿದ 15 ದಿನಗಳಲ್ಲಿ ಹಣ ನೀಡಬೇಕೆಂಬ ನಿಯಮವಿದ್ದರೂ ರೈತರಿಗೆ ಹಣ ಪಾವತಿಯಾಗುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ 27 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಬಾಕಿ 3,000 ಕೋಟಿ ರೂ. ಕೊಡಿಸಲು ಕ್ರಮವಹಿಸಿ. ಕಬ್ಬಿನ ದರ ಏರಿಸಬೇಕು, ಬ್ಯಾಂಕ್ ಕೃಷಿ ಸಾಲ ನೀತಿ ಬದಲಿಸಿ ರೈತನ ಜಮೀನು ಮೌಲ್ಯದ ಶೇ.75 ಕೃಷಿ ಸಾಲ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ರೈತರನ್ನು ಆತಂಕಕ್ಕೀಡು ಮಾಡುವ ಸಾಲ ವಸೂಲಿ ಏಜೆನ್ಸಿಗಳನ್ನು ರದ್ದುಪಡಿಸಬೇಕು.
ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಕೃಷಿ ಸಾಲಗಳ ಸಂಪೂರ್ಣ ಮನ್ನಾ, ಪ್ರತಿ ಎಕರೆಗೆ 25,000 ರೂ.ನಂತೆ ಬರ ಪರಿಹಾರ, ಕೃಷಿ ಚಟುವಟಿಕೆಗಳಿಗಾಗಿ ಚಿನ್ನಾಭರಣಗಳ ಮೇಲೆ ಪಡೆಯುತ್ತಿರುವ ಸಾಲಕ್ಕೆ ಹಳೆಯ ಮಾದರಿಯಂತೆ ಬಡ್ಡಿ ಮುಂದುವರಿಸಬೇಕು ಎಂದು ರೈತ ಸಂಘಟನೆಗಳು ಮುಖಂಡರು ಕೋರಿದರು.
ಸುದೀರ್ಘ ಚರ್ಚೆ, ಮನವಿಗಳ ಮಹಾಪೂರ: ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಪ್ರಮುಖರು, ಹಲವು ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಜತೆ ಸಿಎಂ ಮೂರು ತಾಸು ಸುದೀರ್ಘವಾಗಿ ರ್ಚಚಿಸಿದರು. ಇದೇ ವೇಳೆ ಬಜೆಟ್ನಲ್ಲಿ ಸೇರ್ಪಡೆಗೆ ಸಲಹೆ, ಅಹವಾಲುಗಳ ಮಹಾಪೂರವೇ ಹರಿದು ಬಂದವು. ಕಳಸ-ಬಂಡೂರಿ ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತುರ್ತು ಕಾನೂನು ಕ್ರಮ, ಬೆಳೆ ವಿಮೆ ಸರಳೀಕರಣ, ರಾಜ್ಯವ್ಯಾಪಿ ಆನ್ಲೈನ್ ಟ್ರೇಡಿಂಗ್, ಎ.ಕೆ.ಬಜಾಜ್ ಸಮಿತಿ ವರದಿಯಂತೆ ಕೃಷಿ ಆಧಾರಿತ ನೀರಾವರಿ ಯೋಜನೆ ತ್ವರಿತ ಜಾರಿ, ಕಬ್ಬು ಹಾಗೂ ರೇಷ್ಮೆ ಬೆಳೆಗೆ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಅನ್ವಯ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಸಕಾಲಕ್ಕೆ ಮಾರುಕಟ್ಟೆ ಮಧ್ಯೆಪ್ರವೇಶ, ಸಮುದಾಯ ಬೀಜ ಸಂಗ್ರಹಣಾ ಕೇಂದ್ರಗಳ ಸ್ಥಾಪನೆ, ಪ್ರಕೃತಿ ವಿಕೋಪ ನಷ್ಟ ಪರಿಹಾರ ನಿಧಿಗೆ ಕನಿಷ್ಠ 500 ಕೋಟಿ ರೂ. ಮೀಸಲಿಡಿ ಇತ್ಯಾದಿ ಬೇಡಿಕೆಗಳನ್ನು ಸಿಎಂ ಮುಂದಿಡಲಾಯಿತು.
ಎಲ್ಲ ಜಿಲ್ಲೆಗಳಿಂದ ಬಂದಿದ್ದ ರೈತರ ಜತೆ ರ್ಚಚಿಸಿ ಸಮಸ್ಯೆಗಳನ್ನು ಆಲಿಸಿದ್ದೇನೆ. ಬಜೆಟ್ನಲ್ಲಿ ಇದನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವೆ. | ಬಿ.ಎಸ್.ಯಡಿಯೂರಪ್ಪ ಸಿಎಂ
ತುಂಗಭದ್ರಾ-ಕೃಷ್ಣಾ ಜೋಡಣೆ
ಪ್ರವಾಹ ಬಂದಾಗ ನೀರು ಪೋಲು ತಡೆದು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತುಂಗಭದ್ರಾ ನದಿಗೆ ಕೃಷ್ಣಾ ನದಿಯನ್ನು ಜೋಡಿಸಬೇಕು. ಈ ಯೋಜನೆ ಆಲಮಟ್ಟಿ ಅಣೆಕಟ್ಟೆ ಮೂಲಕ ಜಾರಿಗೆ ತರಲು ಸಾಧ್ಯವಿದೆ ಎಂಬ ವಾದವನ್ನು ರೈತರು ಮಂಡಿಸಿದರು. ಜಿಲ್ಲಾ ಖನಿಜ ನಿಧಿಯಡಿ ಲಭ್ಯ 14,000 ಕೋಟಿ ರೂ. ಬಳಸಿಕೊಂಡು ತುಂಗಭದ್ರಾ ಜಲಾಶಯದ ಹೂಳೆತ್ತುವುದು, ಸಮಾನಾಂತರ ಜಲಾಶಯಗಳ ನಿರ್ವಣದ ಮೂಲಕ ಕುಡಿವ ನೀರು, ನೀರಾವರಿ ಯೋಜನೆ ಗಳಿಗೆ ನೀರು ಖಾತರಿಪಡಿಸಲು ಸಾಧ್ಯವಿದೆ ಎಂದರು.