

ವಿಜಯಪುರ: ಬಸವ ಜಯಂತಿ ಹಾಗೂ ರೇಣುಕಾಚಾರ್ಯರ ಜಯಂತಿ ಒಟ್ಟಿಗೆ ಆಚರಿಸುವುದರ ಹಿಂದೆ ಬಸವಣ್ಣನವರನ್ನು ಹಿಂದಕ್ಕೆ ಸರಿಸಿ ರೇಣುಕಾಚಾರ್ಯರನ್ನು ಮುಂದೆ ತರುವ ಸಂಚು ಆಗಿದೆ. ಹೀಗಾಗಿ ಅದಕ್ಕೆ ತಮ್ಮ ವಿರೋಧ ಇರುವುದಾಗಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು ಪ್ರತಿಕ್ರಿಯಿಸಿದರು.
ಬಸವ ಮತ್ತು ರೇಣುಕಾಚಾರ್ಯರ ಜಯಂತಿ ಒಟ್ಟಿಗೆ ಆಚರಿಸುವ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿಕೆ ಕೊಟ್ಟಿದ್ದಾರೆ. ಇದು ಆದೇಶ ರೂಪದಲ್ಲಿ ಬಂದಿದೆ. ಹೀಗಾಗಿ ನಾವು ಇದನ್ನು ವಿರೋಧಿಸುತ್ತೇವೆ. ಈಗ ಹೊಸ ಪದ್ಧತಿ ತರಲು ಹೊರಟಿದ್ದಾರೆ. ಹಾಗಾದರೆ, ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕರೆಂದು ನೀವು ಒಪ್ಪುತ್ತೀರಾ?, ನೀವು ಒಪ್ಪಿಕೊಳ್ಳುವುದಾದರೆ ಮುಂದೆ ಆಲೋಚನೆ ಮಾಡೋಣ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಮುಂದುವರಿದು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳಲು ಸಿದ್ಧತೆ ಇಲ್ಲದಿರುವಾಗ, ಬರೀ ರೇಣುಕಾಚಾರ್ಯರನ್ನು ಮುಂದೆ ತರಬಾರದು. ಅಲ್ಲದೇ, ಅವರನ್ನು ಇವರ ಜತೆ ಆಗಲಿ, ಮತ್ತೊಬ್ಬರ ಜತೆ ಆಗಲಿ ಜೋಡಿಸುವುದು ಅವಮಾನ. ಪ್ರತ್ಯೇಕವಾಗಿ ಜಯಂತಿ ಮಾಡಿದರೆ, ಅದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದರು.
ಶರಣರು ಕೊಟ್ಟಿದ್ದನ್ನು ಪರಿಪಾಲನೆ ಮಾಡಬೇಕು. ಶರಣರು, ಸಂತರ ಬದುಕಿಗೆ ಮಸಿ ಬಳಿಯುವ ಕೆಲಸವನ್ನೂ ಸಮಾಜದಲ್ಲಿ ಯಾರೂ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದರೆ ಗಣಾಚಾರ ಪ್ರವೃತ್ತಿಯನ್ನು ಸಮಾಜ ಬಾಂಧವರು ಬೆಳೆಸಿಕೊಳ್ಳಬೇಕು. ವಚನ ದರ್ಶನ ಕೃತಿ ಹೆಸರಲ್ಲಿ ಮಸಿ ಬಳಿಯುವ ಕೆಲಸ ಮಾಡಲಾಗಿದೆ. ಒಂದು ವರ್ಷದ ಹಿಂದೆ ಕೃತಿ ಬಿಡುಗಡೆಗೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಕೃತಿಗೆ ವಿರುದ್ಧವಾಗಿ ವಚನ ದರ್ಶನ ಸತ್ಯ ಮಿತ್ಯ ಎಂಬ ಕೃತಿ ಬಂದಿದೆ ಎಂದು ಹೇಳಿದರು.
ಇದೇ ವೇಳೆ, ಈ ಹಿಂದೆ ಮಾಡಿರುವ ಜಾತಿಗಣತಿ ಸರಿಯಲ್ಲ ಎಂಬುವುದು ಬಹುತೇಕರ ಅಭಿಪ್ರಾಯವಾಗಿದೆ. ಆದ್ದರಿಂದ ಹೊಸದಾಗಿ ಕಾನೂನು ಬದ್ಧ ಮತ್ತು ಶಾಸ್ತ್ರೀಯವಾಗಿ ಜಾತಿಯ ಹಿನ್ನಲೆಯಲ್ಲಿ ಮತ್ತೊಮ್ಮೆ ಗಣತಿ ಮಾಡಬೇಕು. ಆಗ ಸೌಲಭ್ಯಗಳು ಸಿಗಬೇಕಾದವರಿಗೆ ಸಿಗುತ್ತವೆ. ಇಲ್ಲವಾದರೆ, ಏನೇನೋ ಅವಾಂತರಗಳು ಆಗುತ್ತವೆ ಎಂದು ಸ್ವಾಮೀಜಿ ಹೇಳಿದರು.