

ರಾಜಸ್ಥಾನ: ರಾಜಸ್ಥಾನದ ವಿರೋಧ ಪಕ್ಷದ ನಾಯಕನ ಎಲೆಕ್ಟ್ರಿಕ್ ಕಾರು ರಸ್ತೆಯ ಮಧ್ಯಲ್ಲಿಯೇ ಕೆಟ್ಟುನಿಂತ ಹಿನ್ನೆಲೆ ಸ್ಥಳದಲ್ಲಿಯೇ ಇದ್ದ ರೈತರು ಎತ್ತಿನಬಂಡಿ(Bullock cart) ಮೂಲಕ ಕಾರನ್ನು ರಿಪೇರಿಗೆ ಕರೆದೊಯ್ದ ಘಟನೆಯ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇಲ್ಲಿನ ದೀದ್ವಾನ ಜಿಲ್ಲೆಯ ಕುಚಮನ್ ನಗರದ ಪುರಸಭೆಯ ವಿರೋಧ ನಾಯಕ ಅನಿಲ್ ಸಿಂಗ್ ಮೆಡ್ತಿಯಾ ಅವರ ಎಲೆಕ್ಟ್ರಿಕ್ ಕಾರು ಎಂದು ಹೇಳಲಾಗಿದೆ. ಮೆಡ್ತಿಯಾ ಅವರು ನಗರದಿಂದ ದೀದ್ವಾನ ಜಿಲ್ಲೆಗೆ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದರು. ಏಕಾಏಕಿ ಕಾರು ಕೈಕೊಟ್ಟಿದೆ. ಕಾರು ಮರು ಚಾಲನೆಗೆ ಬೇಕಾದ ಎಲ್ಲ ಪ್ರಯತ್ನಗಳನ್ನು ಅನಿಲ್ ಸಿಂಗ್ ಮಾಡಿದ್ದಾರೆ. ಆದರೆ ಅವರ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಇದನ್ನರಿತ ಸ್ಥಳದಲ್ಲಿಯೇ ಇದ್ದ ರೈತರು ತಮ್ಮ ಎತ್ತಿನಗಾಡಿಗೆ ಕಾರ್ ಬ್ಯಾನೆಟ್ ಕಟ್ಟಿ ರಿಪೇರಿ ಅಂಗಡಿಗೆ ತಂದಿದ್ದಾರೆ.
ವಿಡಿಯೋ ಭಾರಿ ವೈರಲ್
ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಕಾರನ್ನು ದೇಶಿ ಸಾಂಪ್ರದಾಯಿಕ ಎತ್ತಿನಬಂಡಿ ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ದೃಶ್ಯ ನೋಡುಗರನ್ನು ಗಮನ ಸೆಳೆದಿದೆ. ಅಲ್ಲದೆ, ಕೆಲವರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದೀಗ ಈ ದೃಶ್ಯದ ಕ್ಲಿಪ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಇದೀಗ ನಟ್ಟಿಗರು ಹಾಸ್ಯಮಯ ಮತ್ತು ವಿಭಿನ್ನ ಪ್ರತಿಕ್ರಿಯೆಗಳನ್ನು ಮಾಡುತ್ತಿದ್ದಾರೆ.(ಏಜೆನ್ಸೀಸ್)