

ವಿಜಯಪುರ : ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕುರಿತು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಸೆ. 19ರಂದು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ಹೇಳಿದರು.
ಕಳೆದ ವರ್ಷ ಜನವರಿ 14 ರಿಂದ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆದಿತ್ತು. ನಂತರ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ, ಶರಣು ಶರಣಾರ್ಥಿ ಯಾತ್ರೆ ಹೀಗೆ ಅನೇಕ ಹಲವಾರು ರೀತಿಯ ಹೋರಾಟಗಳನ್ನು ಮಾಡಿದರು ಕೂಡ ಸರ್ಕಾರ ಇಲ್ಲಿಯವರೆಗೂ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡುವುದನ್ನು ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಎಲ್ಲ ತಾಲೂಕಿನಿಂದ ಸಮಾಜದ ಪದಾಧಿಕಾರಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಗಳಲ್ಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು. ವಿಜಯಪುರ ಜಿಲ್ಲೆಯಿಂದ ಸುಮಾರು ಎರಡು ಸಾವಿರ ಜನ ಭಾಗವಹಿಸುವರು ಎಂದು ಮಾಹಿತಿ ನೀಡಿದರು
ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಕಿಡಿ
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಇತ್ತೀಚೆಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಬಾರದು ಎಂದು ಹೇಳಿರುವುದು ಖಂಡನೀಯ. ಸ್ವತಃ ಈಶ್ವರಪ್ಪ ಅವರೇ ಕುರುಬ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಬೇಕೆಂದು ಪಾದಯಾತ್ರೆ ಹೋರಾಟ ಮಾಡಿ ಇದೀಗ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಡಿ ಎಂದು ಹೇಳಿಕೆ ಕೊಟ್ಟಿರುವುದನ್ನು ನೋಡಿದರೆ ಅವರಿಗೆ ಸಚಿವ ಸ್ಥಾನದಿಂದ ವಜಾ ಮಾಡಿರುವುದರಿಂದ ಬುದ್ಧಿ ಭ್ರಮಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸಮಾಜದ ಗುತ್ತಿಗೆದಾರ ಬೆಳಗಾವಿ ಜಿಲ್ಲೆಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡು ಡೆತ್‌ನೋಟ್‌ನಲ್ಲಿ ಈಶ್ವರಪ್ಪ ಅವರ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೂಡ ಪತ್ರ ಬರೆದು ಈಶ್ವರಪ್ಪನ ಕಿರುಕುಳದಿಂದ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಹೇಳಿರುವುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ವಿಷಯ. ಆದರೂ ರಾಜ್ಯ ಸರ್ಕಾರ ಇವರಿಗೆ ಕ್ಲೀನ್ ಚಿಟ್ ನೀಡಿರುವುದು ಅಪಾಯಕಾರಿ ಬೆಳವಣಿಗೆ ಎಂದರು.
ಜಿಲ್ಲೆಗೆ ನ್ಯಾಯ ಒದಗಿಸಿ
ಕೂಡಲೇ ರಾಜ್ಯ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡಿ ವಿಜಯಪುರ ಜಿಲ್ಲೆಗೆ ಸಚಿವ ಸಂಪುಟದಲ್ಲಿ ನ್ಯಾಯ ಒದಗಿಸಬೇಕು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಸಚಿವರನ್ನಾಗಿ ಮಾಡಿ ವಿಜಯಪುರ ಜಿಲ್ಲಾ ಉಸ್ತುವಾರಿಯನ್ನು ಕೊಡಬೇಕು. ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ನಮ್ಮ ಸಮಾಜದ ಎಲ್ಲ ಶಾಸಕರು ಪಕ್ಷಾತೀತವಾಗಿ ಮೀಸಲಾತಿ ಬಗ್ಗೆ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ಲಿಂಗಾಯತ ಪಂಚಮಸಾಲಿ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ್ ದೇವರ ಹಿಪ್ಪರಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಸೋಲಾಪುರ, ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬುಕ್ಕಣಿ, ಪ್ರಶಾಂತ್ ಮುಂಜಾನೆ, ದಯಾನಂದ ಜಾಲಗೇರಿ, ಸದಾಶಿವ ಅಳ್ಳಿಗಿಡದ, ಸಿದ್ದು ಹಳ್ಳೂರ, ಎಂ.ಎಂ.ಹಂಗರಗಿ, ಸಂಜು ಬಿರಾದಾರ, ಅಂಬರೀಷ್ ಗೂಳಿ, ಕಾಮರಾಜ ಬಿರಾದಾರ, ವಿಠ್ಠಲ ವಡಗಾವ, ಪ್ರವೀಣ ಪಾಟೀಲ್, ಶೋಭಾ ಬಿರಾದಾರ, ದಾನೇಶ ಅವಟಿ ಉಪಸ್ಥಿತರಿದ್ದರು.