ಮನೆಯಲ್ಲೇ ಐಸೋಲೇಷನ್​ಗೆ ಅವಕಾಶ!: ಕರೊನಾದ ಲಘು ಲಕ್ಷಣವಿರುವವರಿಗೆ ಅನ್ವಯ- ಒಪ್ಪಿಗೆ ಪತ್ರಕ್ಕೆ ಸಹಿ ಕಡ್ಡಾಯ

Coronavirus 23 april 20
Published on

ನವದೆಹಲಿ: ಕರೊನಾ ಸೋಂಕಿನ ಲಘು ಲಕ್ಷಣ ಕಾಣಿಸಿಕೊಂಡವರಿನ್ನು ಆಸ್ಪತ್ರೆ ಅಲೆದಾಟದ ಬಗ್ಗೆ ಭಯ ಪಡಬೇಕಿಲ್ಲ. ಇಂತಹ ರೋಗ-ಪೂರ್ವ ಲಕ್ಷಣ (ಪ್ರಿ-ಸಿಂಪ್ಟಮ್ಯಾಟಿಕ್) ಇರುವವರನ್ನು ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿರಿಸುವುದಕ್ಕೆ (ಹೋಂ ಐಸೋಲೇಷನ್) ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇಂತಹ ರೋಗಿಗಳು ಸೌಲಭ್ಯವಿದ್ದರೆ ಮನೆಯಲ್ಲೇ ಐಸೊಲೇಷನ್​ಗೆ ಒಳಪಡ ಬಹುದಾಗಿದೆ. ಆದರೆ ಸರ್ಕಾರಿ ಕಣ್ಗಾವಲು ಅಧಿಕಾರಿ ಹಾಗೂ ಒಂದು ಆಸ್ಪತ್ರೆಯ ನಿರಂತರ ಸಂಪರ್ಕದಲ್ಲಿರಬೇಕು. ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕು. ರೋಗಿ ಸರ್ಕಾರದ ಆರೋಗ್ಯ ಸೇತು ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು. ಅದನ್ನು ಸದಾ ಕ್ರಿಯಾಶೀಲ ಸ್ಥಿತಿಯಲ್ಲಿಡಬೇಕು. ಸದ್ಯ ಕೊವಿಡ್-19 ಪಾಸಿಟಿವ್ ಇರುವವರನ್ನು ತಕ್ಷಣವೇ ಪ್ರತ್ಯೇಕಿಸಲಾಗುತ್ತದೆ ಹಾಗೂ ಆಸ್ಪತ್ರೆ, ತಾತ್ಕಾಲಿಕ ಆಸ್ಪತ್ರೆ ಅಥವಾ ಕರೊನಾ ವೈರಸ್ ರೋಗಿಗಳಿಗೆಂದೇ ಮೀಸಲಿರಿಸಿದ ವಾರ್ಡ್​ಗಳಿಗೆ ದಾಖಲಿಸಲಾಗುತ್ತಿದೆ.

ಯಾವಾಗ ಅಂತ್ಯ?: ರೋಗ ಲಕ್ಷಣಗಳು ಕೊನೆಗೊಂಡಿವೆಯೆಂದು ವೈದ್ಯರು ತಿಳಿಸಿ, ಪ್ರಯೋಗಾಲಯ ಪರೀಕ್ಷೆಗಳ ಬಳಿಕ ಸೋಂಕಿನಿಂದ ಮುಕ್ತರಾಗಿದ್ದಾರೆಂದು ವೈದ್ಯಕೀಯ ಅಧಿಕಾರಿ ಪ್ರಮಾಣಪತ್ರ ನೀಡಿದ ನಂತರ ರೋಗಿಯ ಹೋಂ ಐಸೊಲೇಷನ್ ಕೊನೆಗೊಳ್ಳುತ್ತದೆ.

ಯಾರು ಅರ್ಹರು? ಮಾಡಬೇಕಾದ್ದೇನು?

1)ಲಘು ಅಥವಾ ರೋಗ-ಪೂರ್ವ ಲಕ್ಷಣವೆಂದು ವೈದ್ಯರು ದೃಢಪಡಿಸಿದ ವ್ಯಕ್ತಿ

2) ಇಂಥ ಲಕ್ಷಣಗಳಿದ್ದು ಮನೆಯಲ್ಲೇ ಸ್ವಯಂ-ಐಸೊಲೇಷನ್ ಮತ್ತು ಕುಟುಂಬ ಸದಸ್ಯರಿಗೆ ಕ್ವಾರಂಟೈನ್ ಸೌಲಭ್ಯವಿದ್ದವರು

3) ದಿನವಿಡೀ ಆರೋಗ್ಯ ಸಂರಕ್ಷಣೆಗೆ ಯಾರಾದರೊಬ್ಬರು ಲಭ್ಯವಿರ ಬೇಕು. ಆರೈಕೆದಾರ, ಆಸ್ಪತ್ರೆ ನಡುವೆ ಸದಾ ಸಂವಹನ ಇರಬೇಕು

4) ಆರೈಕೆದಾರ ಹಾಗೂ ಇಂಥ ರೋಗಿಗಳ ನಿಕಟ ಸಂಪರ್ಕ ಇರುವವರು ಹೈಡ್ರಾಕ್ಸಿಕ್ಲೋರೋಕ್ವಿನ್ ಪೊ›ಫಿಲಾಕ್ಸಿಸ್ ಮಾತ್ರೆ ಸೇವಿಸುವುದು ಕಡ್ಡಾಯ. ಇದು ವೈದ್ಯರ ಸೂಚನೆ ಮೇರೆಗೆ ಇರಬೇಕು

5) ಮೊಬೈಲ್​ಫೋನ್​ನಲ್ಲಿ ಆರೋಗ್ಯ ಸೇತು ಆಪ್ ಅಳವಡಿಕೆ, ಬ್ಲೂಟೂತ್, ವೈ-ಫೈ ಮೂಲಕ ನಿರಂತರ ಸಕ್ರಿಯವಾಗಿರತಕ್ಕದ್ದು

6) ಆರೋಗ್ಯದ ಮೇಲೆ ನಿಗಾ ಇಡಲು ಹಾಗೂ ಜಿಲ್ಲಾ ಕಣ್ಗಾವಲು ಅಧಿಕಾರಿಗೆ ನಿರಂತರ ಅಪ್​ಡೇಟ್ ನೀಡಲು ಒಪ್ಪಬೇಕು

7) ಸ್ವಯಂ ಐಸೊಲೇಷನ್​ಗೆ ಒಂದು ಒಪ್ಪಿಗೆ ಪತ್ರ ಬರೆದುಕೊಡಬೇಕು. ಹೋಂ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕು

ನೆರವಿಗೆ ಅಗತ್ಯವಾದ ಲಕ್ಷಣ

ಉಸಿರಾಟಕ್ಕೆ ತೊಂದರೆ

ಎದೆಯಲ್ಲಿ ನಿರಂತರ ನೋವು ಅಥವಾ ಒತ್ತಡ

ಮಾನಸಿಕ ಗೊಂದಲ ಅಥವಾ ನಿದ್ದೆಯಿಂದ ಎದ್ದ ಮೇಲೆ ಹೆಚ್ಚಿನ ಮಂಪರು

ತುಟಿ ಅಥವಾ ಮುಖದ ಮೇಲೆ ನೀಲಿಗಟ್ಟುವಿಕೆ

ವೈದ್ಯರು ಹೇಳುವ ಇತರ ಲಕ್ಷಣಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net