ಸರ್ಕಾರಿ ಆಸ್ತಿ ತನಿಖೆ ದಿಕ್ಕು ತಪ್ಪಿಸಲು ವಿರೋಧಿಗಳು ಮುಂದು

8 mlv 1
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆಸ ಜೆಡಿಎಸ್-ಬಿಜೆಪಿ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದರು.
Published on

ಮಳವಳ್ಳಿ: ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿರುವ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಹಾಗೂ ಅಕ್ರಮ ಮಣ್ಣು ಗಣಿಗಾರಿಕೆ ಮಾಫಿಯಾ ವಿಚಾರಗಳು ಬಹಿರಂಗವಾಗುತ್ತಿದ್ದಂತೆ ಗರಿಗೆದರಿರುವ ರಾಜಕೀಯ ಪಕ್ಷಗಳ ನಾಯಕರು ಈ ವಿಷಯವನ್ನು ಮುಂದಿಟ್ಟುಕೊಂಡು ತಮಗಾಗುವ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ.

ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ಭೂಮಿ ಖಾತೆಯಾಗಿರುವುದನ್ನು ರದ್ದುಪಡಿಸಿ ಸರ್ಕಾರದ ಆಸ್ತಿ ರಕ್ಷಣೆಯ ಕ್ರಮ ಕೈಗೊಂಡಿರುವ ತನಿಖೆಯನ್ನು ದಿಕ್ಕು ತಪ್ಪಿಸಲು ವಿರೋಧಿಗಳು ಮುಂದಾಗಿದ್ದಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ತಾಲೂಕಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಪರಾಭಾರೆ ಆಗುತ್ತಿರುವ ಕುರಿತು ಮೊದಲಿಂದಲೂ ಧ್ವನಿ ಎತ್ತಿದ್ದ ನಾನು ಈಗ ಶಾಸಕನಾಗಿ ಸರ್ಕಾರಿ ಭೂಮಿಯ ರಕ್ಷಣೆ ಕೆಲಸ ಮಾಡುತ್ತಿದ್ದೇನೆ. ಈ ಎಲ್ಲ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ನೀವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಹಾಗೂ ಹಾಗೂ ಕಂದಾಯ ಅಧಿಕಾರಿಗಳನ್ನು ಒಳಗೊಂಡ ಸ್ಪೆಷಲ್ ಟಾಸ್ಕ್‌ಫೋರ್ಸ್ ರಚಿಸುವಂತೆ ಸರ್ಕಾರವನ್ನು ಕೋರಲಾಗಿದೆ. ಈಗಾಗಲೇ ಅಕ್ರಮವಾಗಿ ಪರಾಭಾರೆಯಾಗಿದ್ದ 300 ಎಕರೆ ಭೂಮಿಯನ್ನು ವಶಕ್ಕೆ ಪಡೆದಿದ್ದು, ಇನ್ನೂ 400 ಎಕರೆಯಷ್ಟು ಭೂಮಿ ವಶಕ್ಕೆ ಪಡೆಯುವ ಹಂತದಲ್ಲಿದ್ದೇವೆ ಎಂದರು.

ಈ ಅಕ್ರಮದಲ್ಲಿ ಭಾಗಿಯಾಗಿರುವವರು ಯಾರೇ ಆದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇನೆ. ತಾಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಕಬಳಿಕೆ ಹಗರಣಗಳ ವಿರುದ್ಧ ನಡೆಯುತ್ತಿರುವ ತನಿಖೆಯ ದಿಕ್ಕು ತಪ್ಪಿಸುವ ಸಲುವಾಗಿ ಕೆಲವರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಇಂತಹ ಪ್ರತಿಭಟನೆಗಳಿಗೆ ಹೆದರುವುದಿಲ್ಲ ಎಂದು ಕಿಡಿಕಾರಿದರು.

ಪೂರ್ವಭಾವಿ ಸಭೆ: ಜೆಡಿಎಸ್-ಬಿಜೆಪಿ ಮೈತ್ರಿಕೂಟ ಒಗ್ಗೂಡಿ ಪಟ್ಟಣದಲ್ಲಿ ಹೋರಾಟಕ್ಕಿಳಿಯಲು ಸಜ್ಜಾಗಿದ್ದು, ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎರಡೂ ಪಕ್ಷಗಳ ಮುಖಂಡರು ಸೋಮವಾರ ಒಂದೆಡೆ ಸೇರಿ ಮಾಜಿ ಶಾಸಕ ಅನ್ನದಾನಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಇದರೊಂದಿಗೆ ಮೊದಲ ಬಾರಿಗೆ ಜಿಲ್ಲೆಯಲ್ಲಿ ಉಭಯ ಪಕ್ಷಗಳ ಮೈತ್ರಿಗೆ ಚಾಲನೆ ದೊರೆತಂತಾಗಿದೆ.

ಹೋರಾಟದ ಬಗ್ಗೆ ಸಭೆಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮುಖಂಡರ ಸಲಹೆಗಳನ್ನು ಪಡೆದು ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ ಸಾವಿರಾರು ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಪ್ರಭಾವಿಗಳು ಕಬಳಿಕೆ ಮಾಡಿಕೊಂಡಿದ್ದು, ಈ ಅಕ್ರಮದಲ್ಲಿ ತಾಲೂಕು ಆಡಳಿತ ಕೈ ಜೋಡಿಸಿರುವ ಅನುಮಾನಗಳು ವ್ಯಕ್ತವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಚೊಟ್ಟನಹಳ್ಳಿ ಬಳಿಯ 24 ಎಕರೆ ಸರ್ಕಾರಿ ಭೂಮಿ ಅಕ್ರಮ ಖಾತೆ ಸಂಬಂಧ ಅಧಿಕಾರಿಯ ಮೇಲೆ ಕ್ರಮವಹಿಸಿ ತನಿಖೆ ನೆಪ ಹೇಳಿಕೊಂಡು ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ತಾಲೂಕಿನ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಭೂ ಕಬಳಿಕೆಯಾಗಿದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಜ.10 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅಂದಿನ ಹೋರಾಟಕ್ಕೆ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ಚಂದಳ್ಳಿ ಶ್ರೀಧರ್, ಬಿಜೆಪಿ ತಾಲೂಕು ಅಧ್ಯಕ್ಷ ಕೃಷ್ಣ, ಜಿಪಂ ಮಾಜಿ ಸದಸ್ಯ ಹನುಮಂತು, ಮುಖಂಡರಾದ ಮಲ್ಲೇಗೌಡ, ಸಿದ್ದಾಚಾರಿ, ಸಿದ್ದಲಿಂಗಸ್ವಾಮಿ ಸೇರಿದಂತೆ ನೂರಕ್ಕೂ ಹೆಚ್ಚು ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net