ತಜ್ಞರ ಸಲಹೆ ಇಲ್ಲದೇ ದಿನಪತ್ರಿಕೆ ನಿಲ್ಲಿಸಿದ್ದೇಕೆ? ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ

bombay HC1
Published on

ಮುಂಬೈ: ಇಡೀ ವಿಶ್ವದಲ್ಲಿ ಏಕಾಏಕಿ ಈ ವೈರಸ್​ ಹೇಗೆ ಹರಡಿತು ಎಂಬ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿರುವಾಗಲೇ, ದಿನ ಪತ್ರಿಕೆಗಳಿಂದ ವೈರಸ್​ ಹರಡುತ್ತದೆ ಎಂಬ ಕಾರಣವನ್ನು ನೀಡಿ ಅದನ್ನು ಮನೆಮನೆಗಳಿಗೆ ಹಂಚುವುದಕ್ಕೆ ನಿರ್ಬಂಧಿಸಿದ್ದು ಏಕೆ? ಪತ್ರಿಕೆಗಳಿಂದ ಹಾನಿಯಾಗುತ್ತದೆ ಎಂಬ ಬಗ್ಗೆ ವೈದ್ಯರು, ತಜ್ಞರು, ಸಂಶೋಧಕರು ಏನೂ ಹೇಳದೇ ಇರುವಾಗ ನಿಮ್ಮಷ್ಟಕ್ಕೇ ನೀವು ಈ ನಿರ್ಧಾರ ತೆಗೆದುಕೊಂಡಿದ್ದು ಹೇಗೆ? ಎಂದು ಬಾಂಬೆ ಹೈಕೋರ್ಟ್​ ಮಹಾರಾಷ್ಟ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಮನೆ ಮನೆಗಳಿಗೆ ಪತ್ರಿಕೆ ಹಂಚುವುದಕ್ಕೆ ನಿರ್ಬಂಧ ವಿಧಿಸಿದ್ದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿರುವ ಬಾಂಬೆ ಹೈಕೋರ್ಟ್​ನ ಔರಂಗಾಬಾದ್​ ಪೀಠ, ಈ ಬಗ್ಗೆ ವಿಚಾರಣೆ ನಡೆಸಿತು. ಆರೋಗ್ಯ ತಜ್ಞರ ಅಭಿಪ್ರಾಯ ಪಡೆಯದೇ ನಿಮ್ಮಿಷ್ಟ ಬಂದಂತೆ ಹೇಗೆ ನಡೆದುಕೊಂಡಿರುವಿರಿ ಎಂದು ಪೀಠ ಪ್ರಶ್ನಿಸಿದೆ.

ಪತ್ರಿಕೆಯನ್ನು ಬೇಕಿದ್ದರೆ ಅಂಗಡಿಗೆ ಹೋಗಿ ಖರೀದಿಸಬಹುದು, ಆದರೆ ಮನೆ ಮನೆಗೆ ಹಂಚುವ ಹಾಗಿಲ್ಲ ಎಂದು ಸರ್ಕಾರ ಆದೇಶಿಸಿತ್ತು. ಈ ಬಗ್ಗೆ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಅವರು ತೀವ್ರ ಅಚ್ಚರಿ ವ್ಯಕ್ತಪಡಿಸಿ, 'ಪತ್ರಿಕೆಗಳಿಂದ ವೈರಸ್​ ಹರಡುತ್ತೆ ಎನ್ನುವ ನೀವು, ಅಂಗಡಿಗೆ ಹೋಗಿ ತೆಗೆದುಕೊಳ್ಳಲು ಅನುಮತಿ ನೀಡಿದ್ದೀರಿ. ಇದೆಂಥ ವಿಚಿತ್ರ. ಇದರಲ್ಲಿ ಏನಾದರೂ ಲಾಜಿಕ್​ ಇದೆಯೇ? ಜನರು ಬೇಕಿದ್ದರೆ ಇ-ಪೇಪರ್​ನಲ್ಲಿ ಪತ್ರಿಕೆ ನೋಡುತ್ತಾರೆ ಎಂದು ಹೇಳಿರುವ ನಿಮ್ಮ ಮಾತೇ ಅರ್ಥವಾಗುವುದಿಲ್ಲ. ಇದು ಡಿಜಿಟಲ್​ ಯುಗ ಆಗಿದ್ದರೂ, ಎಲ್ಲರಿಗೂ ಇ-ಪೇಪರ್​ ನೋಡಲು ಬರುವುದು ಹೇಗೆ? ತಜ್ಱರ ಅಭಿಪ್ರಾಯವನ್ನೂ ಪಡೆಯದೇ ಏಕಾಏಕಿ ನೀವೆ ಎಲ್ಲವನ್ನು ಹೇಗೆ ನಿರ್ಧರಿಸಿದ್ದೀರಿ' ಎಂದು ಸರ್ಕಾರಕ್ಕೆ ಪ್ರಶ್ನಿಸಿತು.

ಈ ಮೊದಲು ಮಹಾರಾಷ್ಟ್ರ ಸರ್ಕಾರ, ತನ್ನ ಕ್ರಮವನ್ನು ಸಮರ್ಥಿಸಿಕೊಂಡು, ವೈರಸ್‌ ಒಂದೊಂದು ಮೇಲ್ಮೈಯಲ್ಲಿ ನಿರ್ದಿಷ್ಟ ಸಮಯದವರೆಗೆ ಉಳಿಯುತ್ತವೆ. ಪತ್ರಿಕೆಗಳು ಒಬ್ಬರ ಕೈಯಿಂದ ಮತ್ತೂಬ್ಬರ ಕೈಗೆ ಹೋಗುವಾಗ ವೈರಸ್‌ ಹಬ್ಬುವ ಸಾಧ್ಯತೆಯಿರುತ್ತದೆ’ ಎಂದು ಹೇಳಿತ್ತು. ಇದನ್ನು ನೋಡಿದ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನಗೊಂಡು ಮೇಲಿನಂತೆ ಪ್ರಶ್ನಿಸಿದರು. 'ಕೋರ್ಟ್​ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಎಲ್ಲೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು ಅಥವಾ ಪರಿಣತರ ಅಭಿಪ್ರಾಯ, ಹೇಳಿಕೆಯನ್ನು ಉಲ್ಲೇಖಿಸಿಲ್ಲ. ಮತ್ತೊಂದೆಡೆ, ಅನೇಕ ತಜ್ಞರು ಪತ್ರಿಕೆಗಳ ಮೂಲಕ ಕೋವಿಡ್ ಹರಡಲ್ಲ ಎಂದು ಹೇಳಿರುವುದು ಹಲವು ಪತ್ರಿಕೆಗಳಲ್ಲಿ ವರದಿಯಾಗಿವೆ. ನೀವು ಹೇಗೆ ಈ ನಿರ್ಧಾರಕ್ಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಈ ಎಲ್ಲ ವಿವರಗಳನ್ನು ಹಾಗೂ ತಾವು ಕೇಳಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡುವ ಮೂಲಕ ಹೆಚ್ಚುವರಿಯಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜೂನ್​ 11ಕ್ಕೆ ಮುಂದೂಡಿದರು.

ಈ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್​ಗೆ ಸಹಾಯ ಮಾಡುವ ಸಂಬಂಧ ವಕೀಲ ಸತ್ಯಜಿತ್‌ ಬೋರಾ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ (ಕೋರ್ಟ್​ ಸಹಾಯಕ) ನೇಮಿಸಲಾಗಿತ್ತು. ಅವರು ಪತ್ರಿಕೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೋರ್ಟ್​ಗೆ ಮಾಹಿತಿ ನೀಡಿದ್ದರು. ಕೋರ್ಟ್​ನಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ, ಮಹಾರಾಷ್ಟ್ರ ಸರ್ಕಾರವು ಮುಂಬೈ ಮೆಟ್ರೋಪಾಲಿಟನ್‌ ಪ್ರದೇಶ ಮತ್ತು ಪುಣೆ ಹೊರತು ಪಡಿಸಿ ಉಳಿದ ಕಡೆ ಪತ್ರಿಕೆಗಳ ವಿತರಣೆಗೆ ಅವಕಾಶ ನೀಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net