

Operation Sindoor : ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಾದ್ಯಂತ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ನಡೆಸಿದ ಸರಣಿ ನಿಖರ ದಾಳಿಯಲ್ಲಿ 80ಕ್ಕೂ ಹೆಚ್ಚು ಭಯೋತ್ಪಾದಕರು ಮೃತಪಟ್ಟಿದ್ದಾರೆಂದು ಉನ್ನತ ಭದ್ರತಾ ಮೂಲಗಳು ತಿಳಿಸಿವೆ.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಬಲಿಯಾಗಿದ್ದಕ್ಕೆ ಪ್ರತೀಕಾರವಾಗಿ, ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಇ-ಮೊಹಮ್ಮದ್ (ಜೆಇಎಂ), ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ಗೆ ಸಂಬಂಧಿಸಿದ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು ಗಡಿಯಾಚೆಗಿನ ಕಾರ್ಯಾಚರಣೆ ನಡೆಸಲಾಯಿತು. ಆಪರೇಷನ್ ಸಿಂಧೂರ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪಹಲ್ಗಾಮ್ನಲ್ಲಿ ಪುರುಷ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡುವ ಮೂಲಕ ಅನೇಕ ಮಹಿಳೆಯರ ಹಣೆಯ ಸಿಂಧೂರ ಅಳಿಸಿ ಹಾಕಿದ್ದಕ್ಕೆ ಪ್ರತಿಯಾಗಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ.
ಹಿರಿಯ ಅಧಿಕಾರಿಗಳ ಪ್ರಕಾರ, ಜೆಇಎಂನ ಪ್ರಬಲ ಕೋಟೆಯಾದ ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿ ಎರಡು ದೊಡ್ಡ ದಾಳಿಗಳನ್ನು ನಡೆಸಲಾಗಿದ್ದು, ಪ್ರತಿ ಸ್ಥಳದಲ್ಲಿ ಅಂದಾಜು 25 ರಿಂದ 30 ಭಯೋತ್ಪಾದಕರು ಮೃತಪಟ್ಟಿದ್ದಾರೆ. ಮುರಿಡ್ಕೆಯಲ್ಲಿ, ಎಲ್ಇಟಿಯ ಕೇಂದ್ರ ಮತ್ತು ಸೈದ್ಧಾಂತಿಕ ಪ್ರಧಾನ ಕಚೇರಿಯಾದ ಮಸ್ಜಿದ್ ವಾ ಮರ್ಕಜ್ ತೈಬಾ ಭಾರತೀಯ ಸೇನೆಯ ಗುರಿಯಾಗಿತ್ತು. ಇದನ್ನು ದೀರ್ಘಕಾಲದಿಂದ ಪಾಕಿಸ್ತಾನದ "ಭಯೋತ್ಪಾದನಾ ನರ್ಸರಿ" ಎಂದು ಪರಿಗಣಿಸಲಾಗಿದೆ.
ಇತರ ಗುರಿ ಸ್ಥಳಗಳಲ್ಲಿ ಸಾವುನೋವುಗಳ ಸಂಖ್ಯೆಯನ್ನು ಗುಪ್ತಚರ ಸಂಸ್ಥೆಗಳು ಇನ್ನೂ ಪರಿಶೀಲಿಸುತ್ತಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಒಟ್ಟು 80 ರಿಂದ 90 ಭಯೋತ್ಪಾದಕರನ್ನು ಮಟ್ಟಹಾಕಲಾಗಿದೆ. ದಾಳಿಗೊಳಗಾದ ಸ್ಥಳಗಳಲ್ಲಿ ಜೆಇಎಂ ಮತ್ತು ಎಲ್ಇಟಿ ನಿರ್ವಹಿಸುವ ಲಾಂಚ್ ಪ್ಯಾಡ್ಗಳು, ತರಬೇತಿ ಶಿಬಿರಗಳು ಮತ್ತು ಮೂಲಭೂತೀಕರಣ ಕೇಂದ್ರಗಳು ಸೇರಿವೆ.
ಈ ಮೆಗಾ ದಾಳಿಯ ನಂತರದ ಹೇಳಿಕೆಯಲ್ಲಿ, ಭಾರತೀಯ ಸೇನೆಯು "ನ್ಯಾಯವು ಸಿಕ್ಕಿದೆ" ಎಂಬ ಸಂದೇಶದೊಂದಿಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. (ಏಜೆನ್ಸೀಸ್)