

ಎಲಕಮೋನ್: ಥೋಣಿಪಾರ ಕುಟುಂಬ ಆರೋಗ್ಯ ಕೇಂದ್ರಕ್ಕೆ ನೂತನ ಹೊರರೋಗಿಗಳ ಬ್ಲಾಕ್ ಕಟ್ಟಡವನ್ನು ನಿರ್ಮಿಸಲಾಗಿದ್ದೇ ಆದರೂ ಬಣ್ಣದ ವಿವಾದದಿಂದ ಉದ್ಘಾಟನೆ ಪಡೆಯದೆ ಮುಚ್ಚಿರುವ ಪರಿಸ್ಥಿತಿ ಕೇರಳದ ಎಲಕಮೋನ್ನಲ್ಲಿ ವರದಿಯಾಗಿದೆ. ಶಾಸಕರ ನಿಧಿಯಿಂದ ನಿರ್ಮಿಸಲಾದ ಕಟ್ಟಡದ ಕಾಮಗಾರಿ ಕೆಲ ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡಿತ್ತು. ಶಾಸಕರ ಪ್ರಕಾರ, ಕಟ್ಟಡಕ್ಕೆ ನೀಲಿ ಬಣ್ಣವಿರಲಿ ಎಂದಾದರೆ, ಆರೋಗ್ಯ ಅಧಿಕಾರಿ ಇಲ್ಲ, ಹಳದಿ ಬಣ್ಣ ಬಳಸಿ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ವಾಕ್ಸಮರ ನಡೆದಿದ್ದು, ಬಣ್ಣದ ವಿವಾದ ಇತ್ಯರ್ಥವಾಗದ ಹಿನ್ನಲೆ ಬಿಲ್ಡಿಂಗ್ ಧೂಳು ಹಿಡಿಯುವ ಸ್ಥಿತಿ ತಲುಪಿದೆ.
ಶಾಸಕರ ನಿಧಿ ಹಣದಲ್ಲಿ ನಿರ್ಮಾಣಗೊಂಡ ಹೊರರೋಗಿಗಳ ವಿಭಾಗದ ಕಟ್ಟಡಕ್ಕೆ ನೀಲಿ ಬಣ್ಣವೇ ಇರಬೇಕು ಎಂಬುದು ಶಾಸಕರ ವಾದ. ಆದರೆ, ಇದನ್ನು ವಿರೋಧಿಸಿರುವ ಆರೋಗ್ಯ ಇಲಾಖೆ ಅಧಿಕಾರಿ, ರಾಷ್ಟ್ರೀಯ ಆರೋಗ್ಯ ಮಿಷನ್ ಸೂಚನೆಗಳನ್ನು ಅನುಸರಿಸಿ ಹಳದಿ ಬಣ್ಣ ಬಳಸುವುದು ಸರಿ ಎಂದು ಹೇಳಿದ್ದಾರೆ. ಇದನ್ನು ಖಂಡಿಸಿದ ಶಾಸಕ, ಕಡೆಗೂ ಅಧಿಕಾರಿಯ ನಿಲುವನ್ನು ಧಿಕ್ಕರಿಸಿ, ಬಿಲ್ಡಿಂಗ್ಗೆ ನೀಲಿ ಬಣ್ಣವನ್ನು ಹಚ್ಚಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶಾಸಕ, ನೂತನ ಕಟ್ಟಡದ ಮೇಲೆ ತನ್ನ ಹೆಸರು ಮತ್ತು ತಗುಲಿದ ವೆಚ್ಚವನ್ನು ಬರೆಸಿದ್ದಾರೆ. ಆದರೆ, ಇಬ್ಬರ ಜಟಾಪಟಿ ತಾರಕಕ್ಕೇರಿದ ಹಿನ್ನಲೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದೊರಕಿಲ್ಲ.
ರಾಷ್ಟ್ರೀಯ ಆರೋಗ್ಯ ಮಿಷನ್ ನಿಧಿಯನ್ನು ಸ್ವೀಕರಿಸಲು ಕಟ್ಟಡದ ಬಣ್ಣ ಹಳದಿಯಾಗಿರಬೇಕು. ಅರ್ಧ ಶತಮಾನದಷ್ಟು ಹಳೆಯದಾದ ಆರೋಗ್ಯ ಕೇಂದ್ರದಲ್ಲಿ ಒಮ್ಮೆ ಒಳರೋಗಿ ಸೌಲಭ್ಯವಿತ್ತು. ಸದ್ಯ ಸರಾಸರಿ 200-300ಕ್ಕೂ ಹೆಚ್ಚು ಹೊರರೋಗಿಗಳು ಭೇಟಿ ನೀಡುತ್ತಿದ್ದರೂ ಸೀಮಿತ ಸಿಬ್ಬಂದಿ ಇರುವ ಕಾರಣ ರೋಗಿಗಳನ್ನು ನೋಡಲು ತೀವ್ರ ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ. ನೂತನ ಕಟ್ಟಡ ಓಪನ್ ಆಗಿದಿದ್ದರೆ, ರೋಗಿಗಳಿಗೆ ಅನುಕೂಲವಾಗುತ್ತಿತ್ತು. ಆದರೆ, ಬಣ್ಣದ ವಿವಾದದಿಂದ ಕಟ್ಟಡ ರೋಗಿಗಳ ಸೇವೆಗೆ ಮುಕ್ತವಾಗಿಲ್ಲ ಎಂದು ಹೇಳಲಾಗಿದೆ,(ಏಜೆನ್ಸೀಸ್).