ಆತ್ಮದ ನಿಲುವು ಗೊತ್ತಾಗುವುದು ಜ್ಞಾನಚಕ್ಷುವಿಗೆ ಮಾತ್ರ

Published on
 ಅಲ್ಲಮಪ್ರಭು ಲೋಕೋತ್ತರ ವ್ಯಕ್ತಿ. ಉಪನಿಷತ್ತಿನ ಜಾನಶ್ರುತಿ ಪೌತ್ರಾಯಣನು ರೈಕ್ವನನ್ನು ಬೆಳಕಿಗೆ ತಂದಂತೆ ಅಲ್ಲಮನು ಅನೇಕ ಅಜ್ಞಾತ ಸಾಧಕರನ್ನು ಲೋಕದ ಕಣ್ಣಿಗೆ ತಂದದ್ದುಂಟು. ಅಂಥವರಲ್ಲಿ ಮರುಳುಶಂಕರದೇವನೂ ಒಬ್ಬ. ಇದು ಹುಡುಕಿ, ಹುಡುಕಿಕೊಳ್ಳುವ ಪರಿ. ಬೆಳಕು ಬೆಳಕನ್ನು ಅರಿಯಬಲ್ಲುದೇ ಹೊರತು ಕತ್ತಲಿನೊಡನೆ ಅದು ಲೀನವಾದೀತೆ? ಒಂದು ಹಂತದಲ್ಲಿ ಇದು ಕತ್ತಲು ಹರಿದು ಕೊಂಡ ಕ್ರಮವೂ ಹೌದು. ವೀರಶೈವಾಗಮಗಳ ಆಚೆ, ವೀರಶೈವ ಪುರಾಣಗಳಾಚೆ ಇರುವ ರೂಪಕಗಳನ್ನು ನಾವು ಬಗೆದು ನೋಡಬೇಕಾ ಗಿದೆ. ಹಾಗೆ ನೋಡಿದರೆ, ಅಲ್ಲಮನೇ ಒಂದು ಬೃಹತ್ ರೂಪಕ. ಅವನ ಜೊತೆಗೆ ಉಳಿದವರೆಲ್ಲಾ ಉಪರೂಪಕಗಳ ಹಾಗೆ! ಅಲ್ಲಮನು ಮಾತಿಗೆ ನಿಲುಕಲಾರ, ರೂಪಕಕ್ಕೂ ಸಿಗಲಾರ, ಶಬ್ದಕ್ಕೂ ನಿಲುಕಲಾರ. ಇನ್ನೊಂದು ಬಗೆಯಲ್ಲಿ ನೋಡಿದರೆ ಸ್ಪರ್ಶಕ್ಕೂ ಸಿಗಲಾರ. ಇವೆಲ್ಲಕ್ಕೂ ನಿಲುಕಲು ಬಲ್ಲ ಬಲ್ಲಿದರ ಒಡೆಯ ನಮ್ಮ ಅಲ್ಲಮ!

ಅಲ್ಲಮಪ್ರಭುವು ಸಿದ್ಧರಾಮ ಮತ್ತು ಬಸವಣ್ಣರ ಜೊತೆಗೆ ಮಹಾಮನೆಗೆ ಬರುತ್ತಿದ್ದ. ಅಲ್ಲಲ್ಲಿ ಪ್ರಮಥರ ಗುಂಪಿನಿಂದ ಅನುಭಾವದ ಸದ್​ಗೋಷ್ಠಿಗಳು ನಡೆಯುತ್ತಿದ್ದವು. ಅಲ್ಲಿ ಶಬ್ದಗಳ ಸಡಗರವೂ ಕೇಳುತ್ತಿತ್ತು. ಬಸವರಾಜ ದೇವರು ಬಹಳ ಸಡಗರದಿಂದ ಅಲ್ಲಮನನ್ನು ಮಹಾಮನೆಗೆ ಕರೆದೊಯ್ಯುವಾಗ ಆ ದಾರಿಯಲ್ಲಿ ಮಹಾಪ್ರಸಾದದ ಕುಂಡ ಸಮೀಪವಾಯಿತು. ಆ ಕುಂಡದಲ್ಲಿ ಹನ್ನೆರಡು ವರ್ಷಗಳಿಂದ ಇದ್ದ ಮರುಳುಶಂಕರದೇವನು ಪ್ರಭುದೇವರನ್ನು ಕಂಡನು. ಅಲ್ಲಮನನ್ನು ಕಂಡೊಡನೆ ಮೆಲ್ಲಗೆ ತಲೆ ಇಣುಕಿ ಹಾಕಿ ಆ ಪ್ರಸಾದದ ಕುಂಡದಿಂದ ಹೊರಬಂದನು. ಅದು ಹೇಗಿತ್ತೆಂಬುದನ್ನು ಶೂನ್ಯಸಂಪಾದನಕಾರ ಹೀಗೆಂದು ಬಣ್ಣಿಸುತ್ತಾನೆ.

ವಸಂತಮಾರುತಂ ಬರಲು ಚೂತದಂಕುರಂ ಪೊರಮಡುವಂತೆ/ ಸ್ವಾತಿಯ ವರ್ಷದ ದಿನಕ್ಕೆ ಅಂಬುಧಿಯೊಳಗಿರ್ದ ಮೌಕ್ತಿಕ ಶಂಖುಕ/ ಅಂಬುಧಿಯೊಳಿರ್ದು ಕಾಣಬಪ್ಪಂತೆ ನಲಿದು/ ಸೂಜಿಕಲ್ಲ ಕಾಣುತ್ತ ಸೂಜಿ ಮೆಲ್ಲನೆ ತನ್ನ ಸ್ಥಾನದಿಂದೇಳುವಂತೆ (ಶಿವಗಣಪ್ರಸಾದ ಶೂನ್ಯ.ಸಂ.ಪು 96).

ವಸಂತಮಾಸ ಬಂದಾಗ ಮಾವಿನಮರದಲ್ಲಿ ಚೂತದ ಅಂಕುರ ಉಂಟಾಗುತ್ತದೆ. ಸ್ವಾತಿ ಮಳೆ ಬಿದ್ದಾಗ ಸಮುದ್ರದಲ್ಲಿರುವ ಶಂಖುವಿನಲ್ಲಿ ನವಮೌಕ್ತಿಕವು ಉಂಟಾಗುತ್ತದೆ. ಸೂಜಿಕಲ್ಲು ಮತ್ತೊಂದು ಸೂಜಿಗಲ್ಲನ್ನು ಕಂಡಾಗ ತಾನಿರುವ ಜಾಗದಿಂದ ಮೆಲ್ಲನೆ ಹೊರಬರುವಂತೆ ಮರುಳುಶಂಕರದೇವರು ಹೊರಬಂದರು. ಇಲ್ಲಿರುವ ಸಾಮತಿಗಳು ಅಪೂರ್ವವಾದುವು. ಅಲ್ಲಮ ಮತ್ತು ಮರುಳುಶಂಕರದೇವರ ಸಾಂಗತ್ಯದ ಅಧ್ಯಾತ್ಮದ ಇರವನ್ನು ಇದಕ್ಕಿಂತ ಹೆಚ್ಚಿಗೆ ಹೇಳುವುದು ಕಷ್ಟ!

ಅಲ್ಲಮಪ್ರಭುವು ಮರುಳುಶಂಕರದೇವರನ್ನು ಕಂಡರು! ಅದು ಭೌತಿಕವಾಗಿ, ಲೌಕಿಕ ರೀತಿಯಲ್ಲಿ ಕಂಡದ್ದಲ್ಲ. ಶೂನ್ಯ ಸಂಪಾದನಕಾರ ‘ಜ್ಞಾನಚಕ್ಷುವಿಂಗೆ ಆತ್ಮನ ನಿಲುವ ತೋರಿದಂತೆ, ಅಂಜನವುಳ್ಳವರಿಗೆ ಕಡವರದಿರವು ತೋರಿದಂತೆ’ ಎಂದು ಹೇಳುತ್ತಾನೆ. ಕಾಣುವುದು ಮೂರು ಬಗೆ. ಮೊದಲನೆಯದು ‘ಹೊರಗಣ್ಣು ಎರಡನೆಯದು ‘ಒಳಗಣ್ಣು, ಮೂರನೆಯದು ‘ತಿಳಿಗಣ್ಣು’! ನಮ್ಮ ಹೊರಗಣ್ಣು ಲೋಕದ ಉಪದ್ವಾ್ಯಪ್ಯಗಳನ್ನು ನಮ್ಮ ಅರಿಕೆಗೆ ತರುತ್ತದೆ. ಒಳಗಣ್ಣು ಮಾನವಕುಲದ ಮನೋರಂಗದ ಇತಿಹಾಸವನ್ನು ನಮಗೆ ತೆರೆದು ತೋರಿಸುತ್ತದೆ. ಆದರೆ, ‘ತಿಳಿಗಣ್ಣು’ ಯಾವುದುಂಟೋ ಅದು ಭಗವಂತನ ಗುಣಗಾಥೆಯನ್ನು ನಮ್ಮ ತಿಳಿವಿನ ತಿಳಿವಿಗೇ ತಂದು ಕೊಡುತ್ತದೆ. ಅಲ್ಲಮ- ಮರುಳುಶಂಕರದೇವರು ಪರಸ್ಪರ ಕಂಡದ್ದು ಮೂರನೆಯ ನೆಲೆಯಾದ ‘ತಿಳಿಗಣ್ಣಿ’ನ ಮೂಲಕವೇ. ಅದಕ್ಕಾಗಿಯೇ ಜ್ಞಾನಚಕ್ಷುವಿಗೆ ಮಾತ್ರ ಆತ್ಮದ ನಿಲುವು ಗೊತ್ತಾಗುತ್ತದೆ! ಆಗ ಬಸವಣ್ಣನವರು ಈ ಚೋದ್ಯವನ್ನು ಕಂಡವರೇ ಕೊಂಡಾಡುತ್ತಾರೆ. ಆಗ ಅಲ್ಲಮನು:

ಮನಮನ ಒಂದಾಗಿ ಅರಿವು ಸಯವಾದ ಬಳಿಕ/ಕೊಂಡಾಡಲಿಕ್ಕೆಂಬುದುಂಟೆ ಹೇಳಾ?/ಶಬ್ದಕ್ಕೆ ತೆರಹಿಲ್ಲ, ಗುಹೇಶ್ವರ ಲಿಂಗದಲ್ಲಿ ಬೆರಸಿ/ಬೇರಿಲ್ಲ ಕಾಣಾ ಸಂಗನ ಬಸವಣ್ಣಾ (ಶೂನ್ಯ ಸಂ. ಪುಟ 96) ಎಂದು ಹೇಳುತ್ತಾನೆ. ಈ ವಚನವು ‘ತಿಳಿಗಣ್ಣಿನ ಅಚ್ಚರಿಯನ್ನೂ ತನ್ಮೂಲಕ ಜ್ಞಾನಚಕ್ಷುವಿನ ನೆಲೆ-ಬೆಲೆಯನ್ನೂ ಆಧ್ಯಾತ್ಮಿಕ ನೆಲೆಯಲ್ಲಿ ಮನಗಾಣಿಸಿಕೊಡುತ್ತದೆ! ಈ ವಚನದ ಇಂಗಿತಾರ್ಥವನ್ನು ತುಸು ತಿಳಿಯೋಣ!

ಅಲ್ಲಮ ಮತ್ತು ಮರುಳುಶಂಕರದೇವರ ಮನಸ್ಸುಗಳು ಒಂದಾಗಿವೆಯಷ್ಟೆ. ಅಲ್ಲಿ ಅರಿವು ಒಂದರೊಡನೊಂದು ಕೂಡಿಕೊಂಡಿವೆ. ಹಾಗೆ ಅರಿವು ಕೂಡಿಕೊಂಡಾದ ಮೇಲೆ ಕೊಂಡಾಡುವ ಶಬ್ದಕ್ಕೆ ಜಾಗವೇ ಇರುವುದಿಲ್ಲ. ಆಗ ಇರುವುದು ಕೇವಲ ‘ಹೊರಗಣ್ಣು’ವಿನ ಸಂವೇದನೆ ಮಾತ್ರ. ಎಷ್ಟಿದ್ದರೂ ಅದು ‘ಚರ್ಮಚಕ್ಷು’ ತಾನೆ? ಈ ಚರ್ಮಚಕ್ಷು ಭೌತಜಗತ್ತನ್ನು ಮಾತ್ರ ಕಾಣಿಸಬಲ್ಲುದು! ಮರುಳುಶಂಕರ ದೇವರು ಮಹಾಪ್ರಸಾದದ ಕುಂಡದಿಂದ ಹೊರಬಂದಾಗಲೇ ಗುಹೇಶ್ವರಲಿಂಗದಲ್ಲಿ ಬೆರೆತುಹೋದರು. ಹೀಗೆ ಬೆರೆತುಹೋದ ಮೇಲೆ ಕೊಂಡಾಡುವುದರಲ್ಲಿ ಅರ್ಥ ಏನುಂಟು? ಇದು ಬಸವಣ್ಣನಿಗೆ ಅಲ್ಲಮನ ಪ್ರಶ್ನೆ! ಈ ಪ್ರಶ್ನೆಯಲ್ಲಿ ‘ಸಂಗನ ಬಸವಣ್ಣಾ’ ಎಂದು ಸಂಬೋಧಿಸುವುದನ್ನು ಕಂಡರೆ, ಅಣ್ಣ ಬಸವಣ್ಣನು ಕೂಡಲಸಂಗಮದಲ್ಲಿಯೇ ನೆಲೆನಿಂತವನಲ್ಲವೆ? ಸಂಗದಲ್ಲಿದ್ದು ನಿಸ್ಸಂಗನಾದವನು ನಮ್ಮ ಅಣ್ಣ ಬಸವಣ್ಣ!

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

(ಪ್ರತಿಕ್ರಿಯಿಸಿ: ಡಡಠ್ಠಛಜ್ಞಿಚಃಜಞಚಜ್ಝಿ.ಟಞ, ಞಚ್ಝ್ಝಟ್ಠ್ಟಞಃಜಞಚಜ್ಝಿ.ಟಞ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net