ಹೊದಲ ಗ್ರಾಪಂಗೆ ಒಂದೇ ಮನೆ ಮಂಜೂರು!

vinayak
ಎಂ.ವಿನಾಯಕ್
Published on

ತೀರ್ಥಹಳ್ಳಿ: ತಾಲೂಕಿನ ಹೊದಲ- ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂರಿಲ್ಲದ ನೂರಾರು ಮಂದಿ ಬಡವರಿದ್ದಾರೆ. ಆದರೆ ಮನೆಗಳ ಹಂಚಿಕೆಯಲ್ಲಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಗ್ರಾಪಂ ಸದಸ್ಯ ಎಂ.ವಿನಾಯಕ್ ದೂರಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಯಲ್ಲಿ ತಾಲೂಕಿನ ಹಿಂದುಳಿದ ಸಾಮಾನ್ಯ ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಮಂಜೂರಾದ ಮನೆಗಳ ಹಂಚಿಕೆಯಲ್ಲಿ ಕ್ಷೇತ್ರದ ಶಾಸಕರು, ಗ್ರಾಪಂ ವ್ಯಾಪ್ತಿಯ ಬಡವರಿಗೆ ತಾರತಮ್ಯ ಮಾಡಿದ್ದಾರೆ. ಕೆಲವು ಗ್ರಾಪಂಗಳಿಗೆ 100 ಮನೆಗಳನ್ನು ಹಂಚಿಕೆ ಮಾಡಿದ್ದು, ನಮ್ಮ ಗ್ರಾಪಂಗೆ ಕೇವಲ ಒಂದು ಮನೆ ನೀಡುವ ಮೂಲಕ ಕಡೆಗಣಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಗ್ರಾಪಂನ 150ಕ್ಕೂ ಹೆಚ್ಚು ಮಂದಿ ಅರ್ಹ ಫಲಾನುಭವಿಗಳು ಮನೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಕನಿಷ್ಠ ಕಾಳಜಿ ವಹಿಸದ ಶಾಸಕರು ಬಡವರ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಅರ್ಜಿ ಸಲ್ಲಿಸಿರುವ ಬಡವರ ಸಮಸ್ಯೆಯನ್ನು ಅರಿತು ಶಾಸಕರು ಸೂರಿಲ್ಲದವರ ನೆರವಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಪಕ್ಷದ ಮುಖಂಡರ ಸಲಹೆ ಪಡೆದು ಗ್ರಾಪಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net