

ಶಿವಮೊಗ್ಗ: ರಾಜಕೀಯ ಪಕ್ಷಗಳ ರಾಜ್ಯ ಮಟ್ಟದ ಸಮಾರಂಭಗಳಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವುದು ಈವರೆಗೆ ನಡೆದುಬಂದಿರುವ ಅಘೋಷಿತ ಸಂಪ್ರದಾಯ. ಟ್ರಾೃಕ್ಟರ್-ಬಸ್- ಲಾರಿಗಳಲ್ಲಿ ಜನರನ್ನು ಕರೆತಂದು ಸೇರಿಸುವುದೂ ಅನೂಚಾನವಾಗಿ ನಡೆದುಬಂದಿದೆ.
ಆದರೆ ಜೂ. 7ರಂದು ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಮಾರಂಭದಲ್ಲಿ ಮುಖಂಡರೂ ಸೇರಿ ಕೇವಲ 150 ಕಾರ್ಯಕರ್ತರು ಹಾಜರಿರುತ್ತಾರೆ! ಇದು ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳ ಎಫೆಕ್ಟ್.
ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದಲ್ಲಿ ಕೇವಲ 150 ಜನ ಮಾತ್ರ ಭಾಗವಹಿಸಲಿದ್ದಾರೆ ಎಂಬುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಇಲ್ಲಿ ಸುದ್ದಿಗಾರರಿಗೆ ಖಚಿತಪಡಿಸಿದರು.
ಉಳಿದಂತೆ, ಈ ಸಮಾರಂಭವನ್ನು ಕಾರ್ಯಕರ್ತರು ಕಣ್ತುಂಬಿಕೊಳ್ಳುವುದಕ್ಕೆ ಅನುವು ಮಾಡಿಕೊಡಲು ರಾಜ್ಯದ 8 ಸಾವಿರ ಸ್ಥಳಗಳಲ್ಲಿ ದೊಡ್ಡ ಪರದೆಗಳಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.