ಎಸಿಬಿ ಜಪ್ತಿ ಆಸ್ತಿಯಲ್ಲಿ ಶೇ.10 ಮಾತ್ರ ಖಜಾನೆಗೆ!; ಇನ್ನೂ ತನಿಖಾ ಹಂತದಲ್ಲಿವೆ ಶೇ.80 ಪ್ರಕರಣ...

ACB
Published on

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ವೇಳೆ ಜಪ್ತಿ ಮಾಡಿಕೊಳ್ಳುವ ಅಕ್ರಮ ಆಸ್ತಿ-ಪಾಸ್ತಿಗಳ ಪೈಕಿ ಕೇವಲ ಶೇ.10 ಸಂಪತ್ತು ಮಾತ್ರ ಸರ್ಕಾರದ ಖಜಾನೆ ಸೇರಿದರೆ, ಉಳಿದವು ದಾಳಿಗೊಳಗಾದವರ ಕೈಗೆ ಮರಳುತ್ತಿವೆ! ಎಸಿಬಿ ಅಧಿಕಾರಿಗಳು ಅಘೋಷಿತ ಆಸ್ತಿ ಹೊಂದಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಕಣ್ಣಿಟ್ಟು, ಸೂಕ್ತ ಸಾಕ್ಷಾ್ಯಧಾರಗಳನ್ನು ಕಲೆಹಾಕಿದ ನಂತರವೇ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಜಪ್ತಿ ಮಾಡುತ್ತಾರೆ. ಆದರೂ, ತಾಂತ್ರಿಕ ಅಡೆತಡೆಗಳು, ಆಡಳಿತಾತ್ಮಕ ಕಾರಣಗಳು ಹಾಗೂ ಅಧಿಕಾರಶಾಹಿಯ ಒತ್ತಡದಿಂದ ಪ್ರಕರಣಗಳು ವೇಗದಲ್ಲಿ ಇತ್ಯರ್ಥಗೊಳ್ಳುವುದಿಲ್ಲ. ದಾಳಿಗೊಳಗಾದವರಿಂದ ಜಪ್ತಿ ಮಾಡಿಕೊಂಡ ಆಸ್ತಿಗಳು ಅಕ್ರಮವೇ ಎಂದು ಪೂರಕ ದಾಖಲೆ ಸಂಗ್ರಹಿಸಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸುವ ಹೊತ್ತಿಗೆ ಕನಿಷ್ಠ 3 ರಿಂದ 4 ವರ್ಷಗಳೇ ಆಗಿಹೋಗಿರುತ್ತದೆ. ಈ ಅವಧಿಯಲ್ಲಿ ಭ್ರಷ್ಟ ಅಧಿಕಾರಿಗಳು ಲೆಕ್ಕಪರಿಶೋಧಕರ ನೆರವಿನಿಂದ ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಸಿಕೊಂಡು ಕೋರ್ಟ್​ಗೆ ಪೂರಕ ದಾಖಲೆ ಒದಗಿಸಿ ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ಮತ್ತೆ ಹಿಂಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ಅಕ್ರಮ ಆಸ್ತಿ ಹೊಂದಿರುವುದನ್ನು ಸಾಕ್ಷ್ಯ ಸಮೇತ ಸಾಬೀತುಪಡಿಸುವುದು ಎಸಿಬಿಗೆ ಸವಾಲಿನ ಕೆಲಸವಾಗಿದೆ.

ಏನೇನು ಜಪ್ತಿ?: ಇದುವರೆಗೆ ಎಸಿಬಿ ಅಧಿಕಾರಿಗಳು ರಾಜ್ಯಾದ್ಯಂತ ನಡೆಸಿರುವ ದಾಳಿಯಲ್ಲಿ ಅಂದಾಜು 80 ಕೆಜಿ ಚಿನ್ನಾಭರಣ, 50 ಕೋಟಿ ರೂ.ಗೂ ಅಧಿಕ ನಗದು, ಸಾವಿರಾರು ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳು, 690ಕ್ಕೂ ಹೆಚ್ಚು ನಿವೇಶನಗಳು ಹಾಗೂ ಇನ್ನಿತರ ಮೌಲ್ಯಯುತ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಪೈಕಿ ಭ್ರಷ್ಟ ಅಧಿಕಾರಿಗಳ ಶೇ.10 ಸಂಪತ್ತು ಮಾತ್ರ ಅಕ್ರಮ ಎಂದು ಸಾಬೀತಾಗಿ ಸರ್ಕಾರದ ವಶವಾಗಿದೆ.

ಸೈಟ್ ಮೇಲೆ ಹೂಡಿಕೆ: ಇದುವರೆಗಿನ ಎಸಿಬಿ ದಾಳಿಗಳ ದಾಖಲೆ ಪರಿಶೀಲಿಸಿದಾಗ, ಹೆಚ್ಚಿನ ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದಿಂದ ಬಂದಿರುವ ಬಹುತೇಕ ಹಣವನ್ನು ನಿವೇಶನದ ಮೇಲೆ ಹೂಡಿಕೆ ಮಾಡಿರುವುದು ಕಂಡು ಬಂದಿದೆ. 10-15ಕ್ಕಿಂತ ಅಧಿಕ ನಿವೇಶನ ಹೊಂದಿರುವವರು ಅದನ್ನು ಸಂಬಂಧಿಕರು, ಆಪ್ತರ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಗೊತ್ತಾಗಿದೆ. ಎಸಿಬಿ ಬಲೆಗೆ ಬಿದ್ದ ಒಬ್ಬ ಸಾಮಾನ್ಯ ಅಧಿಕಾರಿ 28 ಪ್ಲಾಟ್ ಹೊಂದಿರುವ ಉದಾಹರಣೆಗಳೂ ಸಿಗುತ್ತವೆ. ಹೀಗೆ ಉನ್ನತ ಹುದ್ದೆಯಲ್ಲಿದ್ದುಕೊಂಡು ಕೋಟ್ಯಂತರ ರೂ. ಬಾಚಿರುವ ಭ್ರಷ್ಟರು ತಮ್ಮ ಪ್ರಭಾವ ಬಳಸಿ ಕಾನೂನಿನ ಉರುಳಿನಿಂದ ತಪ್ಪಿಸಿಕೊಳ್ಳುತ್ತಿದ್ದರೆ, ಸಣ್ಣ-ಪುಟ್ಟ ಪ್ರಕರಣಗಳಲ್ಲಿ ಲಂಚ ಪಡೆದು ಸಿಕ್ಕಿಬಿದ್ದ ನೌಕರರು ಶಿಕ್ಷೆಗೊಳಗಾಗುತ್ತಿದ್ದಾರೆ.

ಸ್ವತಂತ್ರ ತನಿಖಾ ಸಂಸ್ಥೆಯಲ್ಲ: ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಹಾಗೂ ಭ್ರಷ್ಟಾಚಾರ ತಡೆ ಅಧಿನಿಯಮ 1988 ಎರಡು ಪ್ರತ್ಯೇಕ ಶಾಸನಗಳು. ಈ ಹಿಂದೆ ಲೋಕಾಯುಕ್ತ ಪೊಲೀಸರಿಗೆ ಸ್ವತಂತ್ರವಾಗಿ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸಲು ಅವಕಾಶಗಳಿದ್ದವು. ಆದರೆ, ಎಸಿಬಿ ಅಧಿಕಾರಿಗಳು ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಗೃಹಸಚಿವರ ಸಲಹೆಗಾರರು ಸೂಚಿಸಿದಂತೆ ಕೆಲಸ ಮಾಡಬೇಕಿದೆ. ಎಸಿಬಿ ಸಂಸ್ಥೆ ರಾಜ್ಯ ಸರ್ಕಾರದ ಅಧೀನದಲ್ಲೇ ಬರುವುದರಿಂದ ಸ್ವಾಯತ್ತೆ ಇಲ್ಲ. ಎಸಿಬಿ ನಿರ್ವಹಣೆಗೆ ವಾರ್ಷಿಕವಾಗಿ ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ.

ಎಸಿಬಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದರಿಂದಲೇ ದೊಡ್ಡ ಪ್ರಮಾಣದ ದಾಳಿಯಾಗಿದೆ. ಇದರಿಂದ ಭ್ರಷ್ಟಾಚಾರ ಬಯಲಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದ್ದು ವ್ಯವಸ್ಥೆಯ ಶುದ್ಧೀಕರಣವಾಗಲಿದೆ. | ಬಸವರಾಜ ಬೊಮ್ಮಾಯಿ ಸಿಎಂ

ನೆಪಕ್ಕಷ್ಟೇ ಅಧಿಕಾರಿಗಳ ಸಸ್ಪೆಂಡ್!

2016ರಿಂದ ಎಸಿಬಿಯಿಂದ ದಾಳಿಗೊಳಗಾದ 1,335 ಸರ್ಕಾರಿ ನೌಕರರು ಈವರೆಗೆ ಸಸ್ಪೆಂಡ್ ಆಗಿದ್ದಾರೆ. ಇದರಲ್ಲಿ ಬಹುತೇಕರು ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. 2016ರಿಂದ ಇದುವರೆಗೆ ಎಸಿಬಿಯಲ್ಲಿ 1,803 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 682 ಕೇಸ್​ಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. 87 ಪ್ರಕರಣಗಳಲ್ಲಿ ತನಿಖೆ ನಡೆಸಲು ನ್ಯಾಯಾಲಯಗಳಲ್ಲಿ ತಡೆಯಿದೆ. 25 ಪ್ರಕರಣಗಳು ಖುಲಾಸೆಯಾಗಿವೆ. 753 ಕೇಸ್​ಗಳಲ್ಲಿ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. 1,473 ಜನರನ್ನು ಬಂಧಿಸಲಾಗಿದೆ. 520 ಕೇಸ್​ಗಳಲ್ಲಿ ತನಿಖೆ ಕೈಗೊಳ್ಳಲು ಸರ್ಕಾರದ ವಿವಿಧ ಇಲಾಖೆಗಳ ಪೂರ್ವಾನುಮತಿ ಬಾಕಿ ಇದೆ. ದೋಷಾರೋಪ ಪಟ್ಟಿ ಸಲ್ಲಿಸಲು ಸಕ್ಷಮ ಪ್ರಾಧಿಕಾರದಲ್ಲಿ ಬಾಕಿ ಇರುವ ಅಭಿಯೋಜನಾ ಮಂಜೂರಾತಿ ಆದೇಶಗಳ ಸಂಖ್ಯೆ 106 ಇದೆ. 2 ಪ್ರಕರಣಗಳನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿದೆ. ನ್ಯಾಯಾಲಯದಲ್ಲಿದ್ದ 62 ಪ್ರಕರಣಗಳು ವಿಚಾರಣೆಗೆ ಮುಕ್ತವಾಗಿದೆ. ಕ್ಲಾಸ್-1 ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳ ವಿರುದ್ಧ 391 ಪ್ರಕರಣ ದಾಖಲಾಗಿವೆ. 493 ಸರ್ಕಾರಿ ನೌಕರರನ ಇಲಾಖಾ ವಿಚಾರಣೆ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net