

ನವದೆಹಲಿ: ಕರೊನಾ ವೈರಸ್ ಬರಲಿ, ಇನ್ನಾವುದೇ ಇದಕ್ಕಿಂತಲೂ ಭೀಕರ ವೈರಸ್ಸೇ ಹರಡಲಿ... ಭಯೋತ್ಪಾದನಾ ಚಟುವಟಿಕೆಯನ್ನು ವಿಸ್ತರಿಸಿಕೊಳ್ಳುವವರಿಗೇನೂ ಯಾವುದೂ ತಟ್ಟುವುದಿಲ್ಲ ಎನ್ನುವುದಕ್ಕೆ ಇಲ್ಲಿದೆ ನೋಡಿ ಉದಾಹರಣೆ.
ಐಸಿಸ್ ಉಗ್ರ ಸಂಘಟನೆಯ ಕೆಲವು ಭಯೋತ್ಪಾದಕರಿಗೆ ಇದಾಗಲೇ ಕರೊನಾ ಸೋಂಕು ಹರಡಿರುವ ವರದಿಯಾಗುವ ಬೆನಲ್ಲೇ, ಆನ್ಲೈನ್ ಮೂಲಕ ಭಯೋತ್ಪಾದಕರ ನೇಮಕ ಮಾಡುವ ಮೂಲಕ ತನ್ನ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಈ ಬೆಚ್ಚಿ ಬೀಳಿಸುವ ವಿಷಯವನ್ನು ಭಾರತೀಯ ಭದ್ರತಾ ಸಂಸ್ಥೆಗಳು ಸಭೆಯಲ್ಲಿ ಚರ್ಚಿಸಿದೆ.
ಗುಂಪಿನಲ್ಲಿ ಭಾಗಿಯಾಗಿರುವ ಭಯೋತ್ಪಾದಕರಿಗೆ ಇಂಟರ್ನೆಟ್ ಬಳಸುವಾಗ ಭದ್ರತಾ ಸಂಸ್ಥೆಗಳ ರೇಡಾರ್ ಅನ್ನು ಹೇಗೆ ತಪ್ಪಿಸಬೇಕು ಎಂದು ಭಯೋತ್ಪಾದಕ ಸಂಸ್ಥೆ ಕಲಿಸುತ್ತಿದೆ.
ಐಸಿಸ್ ಸಂಘಟನೆಯಿಂದ ಪ್ರಕಟವಾಗುತ್ತಿರುವ 'ದಿ ಸಪೋರ್ಟರ್ಸ್ ಸೆಕ್ಯುರಿಟಿ' ಎಂಬ ಸೈಬರ್ ಸೆಕ್ಯುರಿಟಿ ನಿಯತಕಾಲಿಕದಲ್ಲಿ ಈ ಬಗ್ಗೆ ಪ್ರಸ್ತಾಪವಿದೆ. ಆನ್ಲೈನ್ ಮೂಲಕ ನಡೆಸುವ ನೇಮಕಾತಿ ಹಾಗೂ ತರಬೇತಿಗಳ ಕುರಿತು ಬೇರೆ ಯಾರ ಕೈಗೂ ಸಿಕ್ಕಿಬೀಳದಂತೆ ಏನೆಲ್ಲಾ ಜಾಗೃತೆ ವಹಿಸಬೇಕು ಎಂಬ ಬಗ್ಗೆ ಅದರಲ್ಲಿ ಉಲ್ಲೇಖವಾಗಿದೆ. ಈ ಸಂಚಿಕೆ ಕಳೆದ ಮೇ ತಿಂಗಳಲ್ಲಿ ಪ್ರಕಟವಾಗಿದೆ. ಅಷ್ಟೇ ಅಲ್ಲದೇ ಇದರಲ್ಲಿ ಆನ್ಲೈನ್ ಮೂಲಕದ ಸಂಪೂರ್ಣ ಭಯೋತ್ಪಾದಕ ಚಟುವಟಿಕೆಗಳ ಮಾಹಿತಿ ಇದೆ ಎನ್ನಲಾಗಿದೆ.
ಸೈಬರ್ ಸೆಕ್ಯುರಿಟಿ ಏಜೆನ್ಸಿ ನೀಡಿರುವ ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲಿನ ದಾಳಿಯ ಬಗ್ಗೆ ಆನ್ಲೈನ್ ಮೂಲಕವೇ ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ, ಟೆಲಿಗ್ರಾಮ್, ಟ್ವಿಟರ್ ಮತ್ತು ವಾಟ್ಟ್ಆ್ಯಪ್ಗಳ ನಿರ್ವಾಹಕರು ಪಾಕಿಸ್ತಾನದ ಮೂಲದವರಾಗಿದ್ದು, ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ಇವುಗಳ ಬಳಕೆ ಮಾಡುತ್ತಿರುವ ವಿಷಯ ಇದೀಗ ಬಹಿರಂಗಗೊಂಡಿದೆ.
ಭಾರತೀಯ ಸೇನೆಯ ಪ್ರಕಾರ, ಐಸಿಸ್ ವಿಶೇಷ ವಿಡಿಯೋ ಗೇಮ್ ರಚಿಸಿದೆ. ಇದರ ಮೂಲಕ ಜಿಹಾದ್ ಹರಡಲು ಸಂಚು ರೂಪಿಸುತ್ತಿದೆ, ಈ ಕುರಿತು ಐಸಿಸ್ ತನ್ನ ಆನ್ಲೈನ್ ನಿಯತಕಾಲಿಕ "ದಿ ವಾಯ್ಸ್ ಆಫ್ ಹಿಂದ್" ನಲ್ಲಿ ಏಪ್ರಿಲ್ನಲ್ಲಿ ಬರೆದ ಲೇಖನವೊಂದರಲ್ಲಿ ಪ್ರಸ್ತಾಪಿಸಿರುವ ವಿಷಯ ತಿಳಿದಿದೆ. ಇದಕ್ಕೂ ಮೊದಲು 2020ರಲ್ಲಿ ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಲ್ಖೈದಾ ವೆಬ್ಸೈಟ್ನಲ್ಲಿ ಭಾರತದಲ್ಲಿ ಮಾಡಬಹುದಾದ ದಾಳಿಯ ಬಗ್ಗೆ ವಿವರಣೆ ಇತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಇವೆಲ್ಲವುಗಳ ಸಹಕಾರದಿಂದ ಭಯೋತ್ಪಾದಕರ ಗುಂಪು ಈ ಕರೊನಾವೈರಸ್ ಬಿಕ್ಕಟ್ಟಿನಲ್ಲಿಯೂ ತನ್ನ ಜಾಲವನ್ನು ವ್ಯಾಪಕವಾಗಿ ಹರಡಿಸಿಕೊಳ್ಳುತ್ತಿದೆ ಎನ್ನಲಾಗಿದೆ.