ಜಿ 20 ಶೃಂಗಸಭೆ; ಔಷಧೀಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಆನ್ಲೈನ್ ಡೆಲಿವರಿಗೆ ನಿರ್ಬಂಧ!

delivery boy
Published on

ನವದೆಹಲಿ:  ಭಾರತದ ಸಾಂಸ್ಕೃತಿಕ ಹಾಗೂ ಪ್ರಾದೇಶಿವ ವೈವಿಧ್ಯತೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಿ-20 ಸಭೆಗಳನ್ನು ದೇಶಾದ್ಯಂತ ಹಮ್ಮಿಕೊಂಡಿದೆ. G-20 ಶೃಂಗಸಭೆಗಾಗಿ ಪ್ರಪಂಚದಾದ್ಯಂತದ ಅತಿಥಿಗಳು ದೇಶದ ರಾಜಧಾನಿ ದೆಹಲಿಗೆ ಬರುತ್ತಿದ್ದಾರೆ ಹೀಗಾಗಿ ಕೆಲವು ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ.

ಸೆ. 09 ಮತ್ತು 10ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗೆ ಧಕ್ಕೆಯಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಲವು ವಿಶ್ವನಾಯಕರು ಭಾಗಿಯಾಗುತ್ತಿರುವ ಹಿನ್ನೆಲೆ ಎರಡು ದಿನಗಳ ಕಾಲ ಸಾರ್ವಜನಿಕವಾಗಿ ಸಿಗುತ್ತಿರುವ ಹಲವು ವ್ಯವಸ್ಥಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಜಿ 20 ಶೃಂಗ ಸಭೆ ಹಿನ್ನೆಲೆ ಆಹಾರ, ವಸ್ತು, ಉಪಕರಣ ಸೇರಿದಂತೆ ಯಾವುದೇ ರೀತಿಯ ಆನ್​ಲೈನ್ ಡೆಲಿವರಿ ಸೇವೆಗಳು ಲಭ್ಯವಿರುವುದಿಲ್ಲ. ಭದ್ರತೆಯ ದೃಷ್ಟಿಯಿಂದ ಇವುಗಳಿಗೆ 2 ದಿನಗಳ ಕಾಲ ತಾತ್ಕಾಲಿಕ ನಿರ್ಬಂಧ ಹೇರಿ ನವದೆಹಲಿ ಪೊಲೀಸ್ ಇಲಾಖೆ ಆದೇಶಿಸಿದೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ನವದೆಹಲಿ ಸಂಚಾರಿ ಪೊಲೀಸ್ ವಿಶೇಷ ಆಯುಕ್ತ ಎಸ್.ಎಸ್. ಯಾದವ್ ಮಾತನಾಡಿ, "ಅಂಚೆ ಮತ್ತು ಔಷಧೀಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಆನ್ಲೈನ್ ಸೇವೆಗಳಿಗೆ ಜಿ-20 ಶೃಂಗ ಸಭೆಯ ಸಮಯದಲ್ಲಿ ನಿರ್ಬಂಧ ಹೇರಲಾಗಿದೆ. ಜಿಲ್ಲೆಯಲ್ಲಿ ಯಾವುದೇ ವ್ಯಾಪಾರ ಚಟುವಟಿಕೆಗಳನ್ನು ನಡೆಸುವಂತಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

"ಬೇರೆ ಪ್ರದೇಶಗಳಿಂದ ರೈಲು ಅಥವಾ ವಿಮಾನಗಳಲ್ಲಿ ಬಂದು ಹೊಟೆಲ್​ಗಳಲ್ಲಿ ತಂಗುವವರನ್ನು ಪರಿಶೀಲಿಸಿ ಬೋರ್ಡಿಂಗ್ ಪಾಸ್ ಅಥವಾ ಬುಕಿಂಗ್ ದಾಖಲೆಗಳಿದ್ದಲ್ಲಿ ಮಾತ್ರ ಒಳಕ್ಕೆ ಬಿಡಲಾಗುವುದು ಎನ್ನಲಾಗಿದೆ. ಹಲವು ರೈಲ್ವೇ ನಿಲ್ದಾಣಗಳ ಗೇಟನ್ನು ವಿಐಪಿಗಳ ಓಡಾಟದ ಸಂದರ್ಭ 10-15 ನಿಮಿಷಗಳ ಮುಚ್ಚುವ ಸಾಧ್ಯತೆ ಇದೆ. ಹೀಗಾಗಿ ಸಂಚಾರ ವ್ಯತ್ಯಯ ಉಂಟಾಗಬಹುದು" ಎಂದು ತಿಳಿಸಿದ್ದಾರೆ.

ಜಿ 20ಯಲ್ಲಿ ಎಲ್ಲಾ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ 60 ನಗರಗಳಲ್ಲಿ 220 ಕ್ಕೂ ಹೆಚ್ಚು ಸಭೆಗಳು ನಡೆಯಲಿವೆ ಮತ್ತು ಸುಮಾರು 125 ರಾಷ್ಟ್ರಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಹಾಗೂ ಭಾರತೀಯರ ಕೌಶಲ್ಯಗಳನ್ನು ವೀಕ್ಷಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net