ಐಕ್ಯತೆ, ಸಹಿಷ್ಣುತೆ ಮತ್ತು ನಾಯಕತ್ವದ ಮಹತ್ವದ ಕುರಿತು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೀಡಿರುವ ವಿವರಣೆ

edit 1
Published on

ಕರೊನಾ ಸಾಂಕ್ರಾಮಿಕ ರೋಗ ಮತ್ತಷ್ಟು ಹರಡುವುದನ್ನು ತಡೆಯುವ ಅಸಾಧಾರಣ ಸವಾಲನ್ನು ಎದುರಿಸುತ್ತಿರುವ ಭಾರತ ದೇಶ ಭಾರೀ ಒಗ್ಗಟ್ಟು ಮತ್ತು ತಾಳ್ಮೆಯನ್ನು ಪ್ರದರ್ಶಿಸಿದೆ. ಸಾಂಕ್ರಾಮಿಕ ರೋಗ ಆರಂಭವಾದಾಗ, ಈ ದೇಶದಲ್ಲಿ ಲಾಕ್​ಡೌನ್ ಎನ್ನುವುದು ಅಸಾಧ್ಯವಾದ ಕಲ್ಪನೆಯಾಗಿತ್ತು. ಈಗ ಲಾಕ್​ಡೌನ್ ವಿಸ್ತರಣೆಯ ನಂತರವೂ, ಜನರು ತಮ್ಮನ್ನು ಮತ್ತು ಸಹನಾಗರಿಕರನ್ನು ವೈರಸ್​ನಿಂದ ರಕ್ಷಿಸಿಕೊಳ್ಳುವ ಸಂಕಲ್ಪದಲ್ಲಿ ದೃಢತೆಯಿಂದಲೇ ಇದ್ದಾರೆ. ಈ ನಿಟ್ಟಿನಲ್ಲಿ 130 ಕೋಟಿ ಭಾರತೀಯರು ಕೈಜೋಡಿಸಿದ ರೀತಿ ಜಾಗತಿಕ ಇತಿಹಾಸದಲ್ಲಿ ಅಸಾಧಾರಣವಾದುದಾಗಿದೆ. ಅಸಾಧಾರಣ ನಾಯಕತ್ವ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ನನಗನ್ನಿಸುತ್ತದೆ.

ಸೋಂಕು ಹರಡುತ್ತಿದೆ ಮತ್ತು ಯುದ್ಧದಲ್ಲಿನ ಗೆಲುವು ಇನ್ನೂ ದೂರವಿದೆ. ಆದರೂ, ಆತ್ಮವಿಶ್ವಾಸದಿಂದಿರಲು ನಮಗೆ ಕಾರಣಗಳಿವೆ. ಏಕೆಂದರೆ, ಭಾರತವು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ಸಂಪನ್ಮೂಲಗಳಲ್ಲಿ ಮಿತಿಗಳನ್ನು ಹೊಂದಿರುವ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅಷ್ಟೇ ಅಲ್ಲ, ಇದು ಹೆಚ್ಚು ಜನಸಾಂದ್ರತೆ ಹೊಂದಿರುವ ವಿಶಾಲವಾದ ದೇಶ. ಹೀಗಿದ್ದರೂ ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ ಸಾಂಕ್ರಾಮಿಕದ ಪ್ರಮಾಣವು ಭಾರತದಲ್ಲಿ ಸೀಮಿತವಾಗಿದೆ.

ಕರೊನಾ ವೈರಸ್ ಮನುಷ್ಯರ ಜೀವಗಳನ್ನು ಬಲಿ ಪಡೆಯುವುದನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಇತರರಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು. ಹಾಗಾದಾಗ ಯುದ್ಧವು ಪ್ರಾರಂಭವಾಗುವ ಮೊದಲೇ ವೈರಸ್ ಸೋಲು ಕಾಣುತ್ತದೆ. ನಮ್ಮದು ವಿಭಿನ್ನ ಹಂತದ ಸಾಕ್ಷರತೆ ಹೊಂದಿರುವ ವಿಶಾಲವಾದ ಜನಸಂಖ್ಯೆ, ವಿಭಿನ್ನ ಸಂಸ್ಕೃತಿಗಳ ದೇಶ. ಇಂಥಲ್ಲಿ ಜನರ ಮನವೊಲಿಸುವಲ್ಲಿ ವಿಫಲವಾದರೆ ರಾಷ್ಟ್ರದ ಉದ್ದಗಲಕ್ಕೂ ಇಂತಹ ನಿರ್ಬಂಧವನ್ನು ಜಾರಿಗೊಳಿಸುವುದು ಯಾವುದೇ ಆಡಳಿತಕ್ಕೂ ಅಸಾಧ್ಯ.

ಆದರೂ, ಅಸಾಧ್ಯವಾದದ್ದು ಸಾಧ್ಯವಾಗಿದೆ. ಹೌದು, ಕೆಲವು ವಿಘಟನೆಗಳು ಇದ್ದವು, ಆದರೆ ಅವು ಕೆಲವು ಮಾತ್ರ. ಮಾರ್ಚ್ ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ತಬ್ಲಿಘಿ ಜಮಾತ್ ಘಟನೆ ಮತ್ತು ಲಾಕ್​ಡೌನ್​ನ ಆರಂಭದಲ್ಲಿ ವಲಸೆ ಕಾರ್ವಿುಕರು ಕೆಲವು ನಗರಗಳಿಂದ ತಮ್ಮ ಊರುಗಳಿಗೆ ಸಾಮೂಹಿಕವಾಗಿ ವಲಸೆ ಆರಂಭಿಸಿದ್ದು ದುರದೃಷ್ಟಕರವಾದವು. ಆದರೆ ಅವುಗಳು ಅಪಾರ ಜನಸಂಖ್ಯೆಯ ನಡುವಿನ ದುರ್ಬಲವಾದ ಬಿಡಿ ಪ್ರಕರಣಗಳಲ್ಲದೇ ಮತ್ತೇನೂ ಅಲ್ಲ. ಈಶಾನ್ಯದ ಅರುಣಾಚಲ ಪ್ರದೇಶದಿಂದ ಮತ್ತೊಂದು ತುದಿಯಾದ ಕಚ್​ವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತೀಯರು ಒಂದು ಸಾಮಾನ್ಯ ಉದ್ದೇಶಕ್ಕಾಗಿ ಒಗ್ಗಟ್ಟಾಗಿದ್ದಾರೆ.

ಸ್ವಯಂ ಸಂಯಮದ ಈ ಅದ್ಭುತ ಪ್ರದರ್ಶನಕ್ಕೆ ಕಾರಣವೇನು? ಇದಕ್ಕೆ ಉತ್ತರದ ಒಂದು ಭಾಗವೆಂದರೆ ಭಾರತೀಯರ ಮನಸ್ಸು. ಹಾಗೆಯೇ ನಮ್ಮ ಸಂಸ್ಕೃತಿಯ ಸಂಪ್ರದಾಯಗಳು. ಇನ್ನೂ ಹಲವಾರು ಅಂಶಗಳಿರಬಹುದು. ಆದರೆ ಅವರೆಲ್ಲರನ್ನೂ ಒಂದುಗೂಡಿಸಿದ ಪ್ರಮುಖ ಅಂಶವೆಂದರೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ. ಇಂತಹ ನಿರ್ಣಾಯಕ ಹಂತದಲ್ಲಿ, ಅವರಂತಹ ಪ್ರಧಾನಮಂತ್ರಿಯನ್ನು ಪಡೆದಿರುವುದು ರಾಷ್ಟ್ರದ ಸೌಭಾಗ್ಯವೇ ಸರಿ.

ಸೋಂಕಿತ ರೋಗಿಗಳ ಸಂಖ್ಯೆ ತೀರಾ ಕಡಿಮೆ ಇರುವಾಗಲೇ ಲಾಕ್​ಡೌನ್ ವಿಧಿಸಲು ಪ್ರಧಾನಿಯವರು ನಿರ್ಧರಿಸಿದರು. ಇದು ಅವರ ಕಾಳಜಿಯನ್ನಷ್ಟೇ ಅಲ್ಲ, ಧೈರ್ಯವನ್ನೂ ತೋರಿಸುತ್ತದೆ - ಇತರ ಸಂದರ್ಭಗಳಲ್ಲೂ ನಾವು ಇಂತಹ ಧೈರ್ಯವನ್ನು ನೋಡಿದ್ದೇವೆ. ಜನರ ಜೀವಗಳನ್ನು ಉಳಿಸುವ ಸಲುವಾಗಿ ಇಡೀ ದೇಶವನ್ನು ಸ್ಥಗಿತಗೊಳಿಸುವುದು ಮತ್ತು ಆರ್ಥಿಕತೆಯನ್ನು ಕುಂಠಿತಗೊಳಿಸುವುದು ಅತ್ಯಂತ ಕಠಿಣವಾದ ನಿರ್ಧಾರ. ಮೋದಿಯವರ ಜನಪ್ರಿಯತೆಯು ಈ ಕಠಿಣ ನಿರ್ಧಾರವನ್ನು ವಿರೋಧಿಸುವುದಿಲ್ಲ, ಬದಲಿಗೆ ಸ್ವಾಗತಿಸುತ್ತದೆ. ಜನರು ಉತ್ಸಾಹದಿಂದ ಅದನ್ನು ತಮ್ಮ ಆಂದೋಲನವನ್ನಾಗಿ ಪರಿವರ್ತಿಸಿದರು. ಲಾಕ್​ಡೌನ್​ಗೆ ಮುಂಚಿನ ಜನತಾ ಕರ್ಫ್ಯೂನಲ್ಲಿ ಜನರು ತಮ್ಮ ಚಲನೆಯ ಮೇಲೆ ವಿಧಿಸಿಕೊಂಡ ನಿರ್ಬಂಧಗಳನ್ನು ನಾವು ನೋಡಿದ್ದೇವೆ. ಭಾರತದ ಅಥವಾ ವಿದೇಶದ ಬೇರಾವುದೇ ನಾಯಕ ಸಾರ್ವಜನಿಕರ ವರ್ತನೆಯನ್ನು ಅಕ್ಷರಶಃ ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಯಶಸ್ವಿಯಾಗಿ ಮಾರ್ಪಡಿಸಬಹುದು ಎಂದು ನನಗನ್ನಿಸುವುದಿಲ್ಲ.

ಜನತೆಗೆ ಪ್ರಧಾನಿಯವರು ಮಾಡಿದ ಮನವಿಗಳು

- ಮೊದಲು, ವೈದ್ಯರು ಮತ್ತು ಇತರರಿಗೆ ಕೃತಜ್ಞತೆಯ ಸೂಚಕವಾಗಿ ಚಪ್ಪಾಳೆ ತಟ್ಟುವುದು ಮತ್ತು ನಂತರ ಒಗ್ಗಟ್ಟಿನ ಮತ್ತು ಸಕಾರಾತ್ಮಕತೆಯ ಸಂಕೇತವಾಗಿ ದೀಪಗಳನ್ನು ಬೆಳಗಿಸುವ ಮನವಿಗಳು ಸಾಧಿಸಿದ ಫಲಿತಾಂಶಗಳನ್ನೂ ಮೌಲ್ಯಮಾಪನ ಮಾಡಬೇಕು. ಇಂತಹ ಸಕಾರಾತ್ಮಕತೆಯ ಕಂಪನಗಳು ಈ ವಿನೂತನ ಮಾರ್ಗಗಳ ಮೂಲಕವಲ್ಲದೇ ಬೇರಾವುದರಿಂದಲೂ ದೂರದ ಸ್ಥಳಗಳಲ್ಲಿರುವ ಹಳ್ಳಿಗರನ್ನು ತಲುಪುತ್ತಿರಲಿಲ್ಲವೇನೋ. ಪ್ರಧಾನಮಂತ್ರಿಯವರ ಇಂತಹ ಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸಿವೆ. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಹಳೆಯ ಸಹೋದ್ಯೋಗಿಗಳು ಮತ್ತು ಇತರ ಸಹ ನಾಗರಿಕರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ನನಗೆ ಅವಕಾಶ ಸಿಕ್ಕಾಗ, ಅವರ ತಿಳಿವಳಿಕೆಯ ಮಟ್ಟ ಹಾಗೂ ಕಷ್ಟಗಳ ನಡುವೆಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅವರ ಸಿದ್ಧತೆ ಮತ್ತು ಸಕಾರಾತ್ಮಕ ಮನೋಭಾವ ಕಂಡು ಆಶ್ಚರ್ಯಗೊಂಡಿದ್ದೇನೆ. ಈ ರೂಪಾಂತರಕ್ಕೆ ಮೋದಿಯವರೇ ಕಾರಣವೆಂದು ಅವರು ಹೇಳುತ್ತಾರೆ. ಪ್ರಧಾನ ಮಂತ್ರಿಯ ಮೇಲಿನ ಜನರ ಈ ನಂಬಿಕೆಯೇ ಲಾಕ್​ಡೌನ್ ಅತ್ಯಂತ ಯಶಸ್ವಿಯಾಗಿದೆ ಎಂದು ಖಚಿತಪಡಿಸಿದೆ.

ಹಾಗಂತ, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಅಧಿಕಾರಿಗಳು ಈ ನಿಟ್ಟಿನಲ್ಲಿ ನೀಡಿರುವ ಕೊಡುಗೆಗಳನ್ನು ಗೌಣವಾಗಿಸುವುದು ನನ್ನ ಉದ್ದೇಶವಲ್ಲ. ಹಲವಾರು ಮುಖ್ಯಮಂತ್ರಿಗಳು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಹಲವಾರು ಮೇಯರ್​ಗಳು ಮತ್ತು ಪುರಸಭೆ ಆಯುಕ್ತರು ಹಗಲಿರುಳು ದುಡಿದಿದ್ದಾರೆ. ಈ ಹೊಸ ರೀತಿಯ ಯುದ್ಧದಲ್ಲಿ ನಮ್ಮ ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ಅರೆಸೈನಿಕ ಪಡೆಗಳು ಸಹ ಕಾನೂನು ಜಾರಿಯನ್ನು ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ ಅಗತ್ಯವಿರುವವರಿಗೆ ಸಹಾಯ ನೀಡುವಲ್ಲಿ ಸ್ಥಳೀಯ ಆಡಳಿತಗಳಿಗೆ ನೆರವಾಗಿವೆ. ಆದರೂ, ಮೇಲಿನಿಂದ ಸಮನ್ವಯವಿಲ್ಲದೆ, ಅಂತಹ ಪ್ರಯತ್ನಗಳು ಸ್ಥಳೀಯವಾಗಿ ಮಾತ್ರ ಉಳಿಯುವ ಸಾಧ್ಯತೆಯಿರುತ್ತದೆ, ಒಟ್ಟಾರೆ ಫಲಿತಾಂಶಗಳನ್ನು ನೀಡುವುದಿಲ್ಲ.

ಇದಲ್ಲದೆ, ಗಮನಿಸಬೇಕಾದ ಅಂಶವೆಂದರೆ, ದುರ್ಬಲರು, ದಿನಗೂಲಿಗಳು, ಕಾರ್ವಿುಕರು ಮತ್ತು ರೈತರಿಗೆ ಪ್ರಧಾನಿ ಆದ್ಯತೆ ನೀಡಿರುವುದು. ವಿಶೇಷ ಪ್ಯಾಕೇಜ್​ನಂತಹ ಹಲವಾರು ಕ್ರಮಗಳೊಂದಿಗೆ ಲಾಕ್​ಡೌನ್​ನ ಆರ್ಥಿಕ ಹೊರೆಯಿಂದ ಅವರು ತತ್ತರಿಸದಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ.

ಪ್ರಧಾನ ಮಂತ್ರಿಯವರನ್ನು ಈ ಪಾತ್ರಕ್ಕಾಗಿ ಸಜ್ಜುಗೊಳಿಸಿದ್ದಾದರೂ ಏನು ಎಂದು ಆಶ್ಚರ್ಯವಾಗುತ್ತದೆ. ಮೋದಿ ಅವರಿಗೆ ಬಿಕ್ಕಟ್ಟು ನಿರ್ವಹಣೆಯಲ್ಲಿ ಹಲವು ಅನುಭವಗಳಾಗಿವೆ. 1979 ರಲ್ಲಿ ಗುಜರಾತ್​ನ ಮೊರ್ಬಿಯಲ್ಲಿ ಅಣೆಕಟ್ಟು ಸ್ಪೋಟಗೊಂಡು ಇಡೀ ಪಟ್ಟಣವೇ ಕೊಚ್ಚಿಹೋದಾಗ ಅಲ್ಲಿಗೆ ಮೊದಲು ತಲುಪಿದವರು ಮೋದಿ. ಇನ್ನೂ 20 ರ ಹರೆಯದಲ್ಲಿದ್ದರೂ, ತುರ್ತು ಪರಿಸ್ಥಿತಿ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ ನಂತರ ಆ ಸಮಯದಲ್ಲೇ ಅವರು ಆರ್​ಎಸ್​ಎಸ್ ಒಳಗೆ ಮತ್ತು ಹೊರಗೆ ಅಂಗೀಕರಿಸಲ್ಪಟ್ಟ ನಾಯಕರಾಗಿದ್ದರು. ನಂತರ, ಚುನಾವಣಾ ರಾಜಕೀಯದಲ್ಲಿ ಅವರ ವೃತ್ತಿಜೀವನವು 2001 ರಲ್ಲಿ ಭೂಕಂಪದ ತರುವಾಯ ರಾಜ್ಯವು ಹೊರಬರುತ್ತಿರುವಾಗ ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಪ್ರಾರಂಭವಾಯಿತು, ಅವರು ಕಚ್​ಗೆ ವಾರಕ್ಕೊಮ್ಮೆ ಭೇಟಿ ನೀಡುತ್ತಿದ್ದರು ಮತ್ತು ಪಟ್ಟಣಗಳು ಮತ್ತು ನಗರಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪುನರ್ನಿರ್ವಿುಸಲು ಅವರು ಅಧಿಕಾರಶಾಹಿಯನ್ನು ಸಜ್ಜುಗೊಳಿಸಿದರು. ಇದಕ್ಕಾಗಿ ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಮೆಚ್ಚುಗೆ ಗಳಿಸಿತು.

ಜಗತ್ತು ಈಗ ಎದುರಿಸುತ್ತಿರುವ ಬಿಕ್ಕಟ್ಟನ್ನು ನಿರ್ವಹಿಸುವ ಅನುಭವವನ್ನು ಯಾರೂ ಹೊಂದಿಲ್ಲ. ಅನುಭವಕ್ಕಿಂತ ಹೆಚ್ಚಾಗಿ, ಇದು ಅವರ ಮೂಲಭೂತ ಮೌಲ್ಯಗಳು ಮತ್ತು ಕೆಲಸಕ್ಕೆ ಸಮರ್ಪಣಾ ಮನೋಭಾವ. ಅವರು ತಮ್ಮನ್ನು ತಾವು ‘ಪ್ರಧಾನ ಸೇವಕ’ ಎಂದು ಹೇಳಿಕೊಳ್ಳುತ್ತಾರೆ - ಅದು ಸಣ್ಣ ಪವಾಡವನ್ನೇ ಸೃಷ್ಟಿಸಿದೆ ಎಂದು ನಾನು ವಿನಮ್ರವಾಗಿ ನಂಬಿದ್ದೇನೆ. ಸಹಿಷ್ಣುತೆಯಿಂದ ಪ್ರೇರಿತವಾಗಿರುವ ಒಗ್ಗಟ್ಟಿನ ಭಾರತವು, ಕರೊನಾ ವೈರಸ್ ವಿರುದ್ಧ ನಿಧಾನವಾಗಿ ಮೇಲುಗೈ ಸಾಧಿಸುತ್ತಿದೆ ಮತ್ತು ಪ್ರತಿದಿನವೂ ಬಲಶಾಲಿಯಾಗಿ ಹೊರಹೊಮ್ಮುತ್ತಿದೆ.

| ರಾಜನಾಥ್​ ಸಿಂಗ್​ (ಲೇಖಕರು ರಕ್ಷಣಾ ಸಚಿವರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net