ಕದನ ಕಲಿಗಳ ಆಯ್ಕೆಗೆ ದಿನಕ್ಕೊಂದು ತಿರುವು

mysore
Published on


ಎನ್​ಡಿಎ ಮೈತ್ರಿ ಕೂಟದಲ್ಲಿ ಮುಂದುವರಿದ ಗೊಂದಲ
ಬಿಜೆಪಿ ಹೊರತಾಗಿ ಬೇರೆ ಚಿಹ್ನೆಯಡಿ ಸ್ಪರ್ಧೆಗೆ ಯೋಗೇಶ್ವರ್​ ನಿರಾಕರಣೆ?

ಗಂಗಾಧರ್​ ಬೈರಾಪಟ್ಟಣ ರಾಮನಗರ

ಚನ್ನಪಟ್ಟಣ ಉಪಚುನಾವಣೆ ಕದನ ಕಲಿಗಳ ಆಯ್ಕೆ ಕಸರತ್ತು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಇನ್ನೇನು ಎಲ್ಲ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ ಎನ್ನುವಷ್ಟರಲ್ಲಿಯೇ ಹೊಸ ಬೆಳವಣಿಗೆ ಕ್ಷೇತ್ರದ ರಾಜಕೀಯ ಚಟುವಟಿಕೆ ಸಾಕ್ಷಿ ಆಗುತ್ತಿದ್ದು, ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳು ಕಾಣುತ್ತಿಲ್ಲ.

ಜೆಡಿಎಸ್​ ಟಿಕೆಟ್​ ಒಲ್ಲೆನೆಂದ ಸಿಪಿವೈ


ಎನ್​ಡಿಎ ಮೈತ್ರಿ ಕೂಟದ ಪಾಲುದಾರ ಪಕ್ಷ ಜೆಡಿಎಸ್​ ಅಭ್ಯರ್ಥಿಯಾಗಿ ನಿಖಿಲ್​ ಅಥವಾ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಶನಿವಾರ ಅವರ ಸ್ಪರ್ಧೆ ನಿರಾಕರಣೆ ಹಿನ್ನೆಲೆಯಲ್ಲಿ ಯೋಗೇಶ್ವರ್​ಗೆ ಟಿಕೆಟ್​ ಬಿಟ್ಟುಕೊಡಲು ದಳಪತಿಗಳು ಒಪ್ಪಿ, ಜೆಡಿಎಸ್​ ಚಿಹ್ನೆಯಡಿ ಸ್ಪರ್ಧೆ ಮಾಡುವ ಷರತ್ತು ವಿಧಿಸಿದ್ದರು. ಇದಕ್ಕೆ ಯೋಗೇಶ್ವರ್​ ಒಪ್ಪಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಆದರೆ, ಭಾನುವಾರದ ದಿಢೀರ್​ ಬೆಳವಣಿಗೆಯಲ್ಲಿ ಯೋಗೇಶ್ವರ್​ ಬಿಜೆಪಿ ಹೊರತಾಗಿ ಬೇರೆ ಚಿಹ್ನೆಯಡಿ ಸ್ಪರ್ಧೆಗೆ ನಿರಾಕರಣೆ ಮಾಡಿರುವುದು ಎನ್​ಡಿಎ ಮೈತ್ರಿ ಕೂಟದ ಚಿಂತೆ ಹೆಚ್ಚು ಮಾಡಿದೆ.

ಬಿಡದಿ ಸಭೆ ಶಿಫ್ಟ್

ಭಾನುವಾರ ಅಭ್ಯರ್ಥಿ ಅಂತಿಮಗೊಳಿಸುವ ಸಂಬಂಧ ಎಚ್​.ಡಿ.ಕೆ.ನೇತೃತ್ವದಲ್ಲಿ ಬಿಡದಿಯ ತೋಟದ ಮನೆಯಲ್ಲಿ ಪಕ್ಷದ ಮುಖಂಡರ ಸಭೆ ಕರೆಯಲಾಗಿತ್ತು. ಇಲ್ಲಿಗೆ ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್​ ಹೊರತುಪಡಿಸಿ ಬೇರೆ ಯಾರೂ ಬಂದಿರಲಿಲ್ಲ. ಎಚ್​.ಡಿ.ಕುಮಾರಸ್ವಾಮಿ ಅವರು ಮೈಸೂರು ಪ್ರವಾಸದಿಂದ ಬಿಡದಿಗೆ ಬಾರದ ಹಿನ್ನೆಲೆಯಲ್ಲಿ ಸಭೆಯನ್ನು ಬೆಂಗಳೂರಿನ ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ನಡುವೆ ಸಿ.ಪಿ.ಯೋಗೇಶ್ವರ್​ ಬಿಡದಿಯಲ್ಲಿ ಸುಮಾರು ಒಂದು ಗಂಟೆ ಎ.ಮಂಜುನಾಥ್​ ಜತೆಗೆ ಚರ್ಚೆ ನಡೆಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಕಾಂಗ್ರೆಸ್​ ಸೇರ್ಪಡೆ ಚರ್ಚೆ?:

ಬಿಜೆಪಿ ಚಿಹ್ನೆಯಡಿ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ, ಕಾಂಗ್ರೆಸ್​ನಿಂದ ಕಣಕ್ಕೆ ಇಳಿಯುವ ಬಗ್ಗೆಯೂ ನಿರ್ಧಾರ ಮಾಡಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಕ್ಷೇತ್ರದಲ್ಲಿ ಹರಡಿದೆ. ಈಗಾಗಲೇ ಯೋಗೇಶ್ವರ್​ ಅವರನ್ನು ಕಾಂಗ್ರೆಸ್​ನ ಹಿರಿಯ ನಾಯಕರೇ ಸಂಪರ್ಕಿಸಿದ್ದಾರೆ. ಯೋಗೇಶ್ವರ್​ ಅಂತಿಮ ಹಂತದಲ್ಲಿ ಕೈ ಪಡೆ ಸೇರಲಿದ್ದಾರೆ ಎನ್ನುವ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಬಂದವು. ಇದರೊಂದಿಗೆ ಯೋಗೇಶ್ವರ್​ ನಡೆಯ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

25ಕ್ಕೆ ನಾಮಪತ್ರ ?:

ಈ ಎಲ್ಲ ಬೆಳವಣಿಗೆ ನಡುವೆ ಸಿ.ಪಿ.ಯೋಗೇಶ್ವರ್​ ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಅ.25ರ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ, ಯಾವ ಪಕ್ಷ ಎನ್ನುವುದು ಇನ್ನೂ ಖಾತ್ರಿ ಆಗಿಲ್ಲ. ಬಿಜೆಪಿ ಚಿಹ್ನೆಯಡಿ ಸಿಗದಿದ್ದರೆ ಯೋಗೇಶ್ವರ್​ ಬಹುತೇಕ ಪಕ್ಷೇತರರಾಗಿ ಕಣಕ್ಕೆ ಇಳಿಯಲಿದ್ದಾರೆ, ಯಾವುದೇ ಕಾರಣಕ್ಕೂ ಅವರ ಕಾಂಗ್ರೆಸ್​ಗೆ ಹೋಗುವುದಿಲ್ಲ ಎನ್ನುವ ಅವರ ಆಪ್ತ ಬಳಗದ ದೃಢ ನಿಲುವು.

ಎಲ್ಲವೂ ಎಚ್​ಡಿಕೆ ಕೈಯಲ್ಲಿ?

ಸದ್ಯಕ್ಕೆ ಚನ್ನಪಟ್ಟಣ ಎನ್​ಡಿಎ ಮೈತ್ರಿ ಅಭ್ಯರ್ಥಿ ಆಯ್ಕೆ ಎಚ್​.ಡಿ.ಕುಮಾರಸ್ವಾಮಿ ಅವರ ಅಂಗಳದಲ್ಲಿದೆ. ಒಂದು ಹಂತದಲ್ಲಿ ಕುಟುಂಬದ ಸದಸ್ಯರು ಸ್ಪರ್ಧೆಗೆ ಒಪ್ಪದ ಹಿನ್ನೆಲೆಯಲ್ಲಿ ಸಿ.ಪಿ ಯೋಗೇಶ್ವರ್​ ಸ್ಪರ್ಧೆಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಯೋಗೇಶ್ವರ್​ ಬಿಜೆಪಿ ಟಿಕೆಟ್​ ಕೋರುತ್ತಿರುವುದು ಎಚ್​ಡಿಕೆ ಮುಂದೆ ದೊಡ್ಡ ಸವಾಲನ್ನು ಒಡ್ಡಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್​ಡಿಎ ಅಭ್ಯರ್ಥಿ ಗೆಲ್ಲಿಸಿಕೊಳ್ಳಲೇಬೇಕಿರುವ ಒತ್ತಡ ಎಚ್​ಡಿಕೆಗೆ ಇದೆ. ಪಕ್ಷಕ್ಕೆ ಟಿಕೆಟ್​ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತಾರೋ ಇಲ್ಲ, ಯೋಗೇಶ್ವರ್​ ಮತ್ತು ಇತರ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಬಿಜೆಪಿಗೆ ಟಿಕೆಟ್​ ಬಿಟ್ಟುಕೊಡುತ್ತಾರೋ ಎನ್ನುವ ಕುತೂಹಲ ಮೂಡಿದೆ.

ಕಾದು ನೋಡುವ ತಂತ್ರ
ಎನ್​ಡಿಎ ಪಾಳಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸುತ್ತಿರುವ ಕಾಂಗ್ರೆಸ್​, ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಯೋಗೇಶ್ವರ್​ ಅವರಿಗೆ ಗಾಳ ಹಾಕುವ ಜತೆಗೆ, ಏನೇ ಬೆಳವಣಿಗೆ ಆದರೂ ಲಾಭಕ್ಕೆ ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್​ ಗಂಭೀರ ಪ್ರಯತ್ನ ಮಾಡುತ್ತಿದ್ದಾರೆ. ಒಂದು ವೇಳೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದ್ದರೆ, ಖಂಡಿತವಾಗಿ ಅಂತಹ ಸಂದರ್ಭದಲ್ಲಿ ಸುರೇಶ್​ ಸ್ಪರ್ಧಾ ಕಣದಲ್ಲಿ ಇದ್ದರೆ ಅಚ್ಚರಿ ಪಡುವಂತಿಲ್ಲ ಎನ್ನುತ್ತಿವೆ ಕಾಂಗ್ರೆಸ್​ ಮೂಲಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net