ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಓರ್ವ ಸಾವು,ಮತ್ತಿಬ್ಬರಿಗೆ ಗಾಯ

accident-15
Published on


ಬೆಂಗಳೂರು: ಕೆಂಗೇರಿ ಬಳಿಯ ಕೊಮ್ಮಘಟ್ಟ ಸರ್ಕಲ್ನಲ್ಲಿ ಜಲಮಂಡಳಿ ತೋಡಿದ್ದ ಗುಂಡಿಗೆ ದ್ವಿಚಕ್ರ ವಾಹನ ಸಹಿತ ಬಿದ್ದ ಮೂವರು ಯುವಕರ ಪೈಕಿ ಓರ್ವ ಸವಾರ ಮೃತಪಟ್ಟು, ಉಳಿದಿಬ್ಬರು ಗಾಯಗೊಂಡಿದ್ದಾರೆ.


ಜೆ.ಜೆ.ನಗರದ ಸದ್ದಾಂ ಹುಸೇನ್(೨೦) ಮೃತರು. ಉಮ್ರಾನ್ ಪಾಷಾ ಮತ್ತು ಮುಬಾರಕ್ ಪಾಷಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ಸ್ನೇಹಿತರಾಗಿದ್ದು ಜೆ.ಜೆ.ನಗರ ನಿವಾಸಿಗಳಾಗಿದ್ದಾರೆ.


ಬೆಂಗಳೂರು ಜಲಮಂಡಳಿಯಿಂದ ಕೊಮ್ಮಘಟ್ಟ ಸರ್ಕಲ್ನಲ್ಲಿ ಪೈಪ್ ಅಳವಡಿಸಲು ಗುಂಡಿ ತೆಗೆಯಲಾಗಿದೆ. ಗುಂಡಿಯ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ಮೂವರು ಕೊಮ್ಮಘಟ್ಟದಲ್ಲಿ ಗುಜರಿ ವಸ್ತುಗಳ ವ್ಯಾಪಾರ ಮಾಡುತ್ತಾರೆ. ಭಾನುವಾರ ರಾತ್ರಿ ೮.೩೦ಕ್ಕೆ ವ್ಯಾಪಾರ ಮುಗಿಸಿಕೊಂಡು ಮೂವರು ಯುವಕರು ಒಂದೇ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಹೊರಟ್ಟಿದ್ದರು. ಕೊಮ್ಮಘಟ್ಟ ಸರ್ಕಲ್ ಬಳಿ ಬರುವಾಗ ಬ್ಯಾರಿಕೇಡ್ ನಡುವಿನ ಸಣ್ಣ ಜಾಗದಲ್ಲಿ ವೇಗವಾಗಿ ದ್ವಿಚಕ್ರವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ಮೂವರು ಅಂದಾಜು ೧೦ ಅಡಿ ಇರುವ ಗುಂಡಿಗೆ ಬಿದ್ದಿದ್ದಾರೆ. ಈ ವೇಳೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರ ಸದ್ದಾಂ ಹುಸೇನ್ ಗಂಭೀರಗಾಯವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದಿಬ್ಬರು ಹಿಂಬದಿ ಸವಾರರು ಗಾಯಗೊಂಡು ಗುಂಡಿಯಲ್ಲಿ ಒದ್ದಾಡುತ್ತಿದ್ದರು. ಆಗ ನೆರವಿಗೆ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ಗುಂಡಿಯಿಂದ ಮೇಲಕ್ಕೆ ಎತ್ತಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.


ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕೆಂಗೇರಿ ಸಂಚಾರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಆ ಗುಂಡಿ ಸುತ್ತ ಹೆಚ್ಚುವರಿ ಬ್ಯಾರಿಕೇಡ್ ಅಳವಡಿಸಿ, ಯಾರೋ ಆ ಕಡೆ ಓಡಾಡದಂತೆ ರಸ್ತೆ ಬಂದ್ ಮಾಡಿದ್ದಾರೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಜಲಮಂಡಳಿ ಮುಂಜಾಗ್ರತ ಕ್ರಮ ವಹಿಸಿಲ್ಲ:
ಪೈಪ್‌ಲೈನ್ ಕಾಮಗಾರಿ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಜಲಮಂಡಳಿ ಯಾವುದೇ ಬ್ಯಾರಿಕೇಡ್ ಅಥವಾ ಸೂಚನಾ ಫಲಕ ಅಳವಡಿಸದಿರುವುದು ದುರಂತಕ್ಕೆ ಕಾರಣ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ.ಹದ್ದಣ್ಣನವರ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಜಲಮಂಡಳಿ ವಿರುದ್ಧ ದೂರು ದಾಖಲು:
ಘಟನೆಗೆ ಕಾರಣರಾದ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಮತ್ತು ಕಂಟ್ರಾಕ್ಟರ್ ವಿರುದ್ದ ಕ್ರಮ ಜರುಗಿಸಬೇಕೆಂದು ಮೃತನ ಪಾಲಕರು ಠಾಣೆಗೆ ದೂರು ನೀಡಿದ್ದು, ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net