

ನವದೆಹಲಿ: ಕರೊನಾದ ಭೀಕರ ದ್ವಿತೀಯ ಅಲೆಯಿಂದ ಅಯೋಮಯವಾಗಿರುವ ಜನರ ಆರ್ಥಿಕ ಸ್ಥಿತಿಯನ್ನು ಆಧರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತೊಂದು ಸುತ್ತಿನ ಸಾಲ ಕಂತು ಮರುಪಾವತಿ ಮುಂದೂಡಿಕೆ (ಮಾರಟೋರಿಯಂ) ಯೋಜನೆ ಪ್ರಕಟಿಸಿದೆ.
ರಾಜ್ಯವ್ಯಾಪಿ ಲಾಕ್ಡೌನ್ಗಳಿಂದ ಸಮಸ್ಯೆಗೆ ಒಳಗಾಗಿರುವ ವ್ಯಕ್ತಿಗತ ಸಾಲಗಾರರು ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ಈ ಯೋಜನೆಯ ಲಾಭ ದಕ್ಕಲಿದೆ. ವೈದ್ಯಕೀಯ ಕ್ಷೇತ್ರದ ಉತ್ಪಾದಕರಿಗೆ ನೆರವಾಗಲು 50,000 ಕೋಟಿ ರೂಪಾಯಿಯ ಪ್ಯಾಕೇಜ್ಅನ್ನು ಕೂಡ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ಹಿಂದೆ ಆರ್ಥಿಕ ಮರುಹೊಂದಾಣಿಕೆ ಯೋಜನೆಯ ಅನುಕೂಲ ಪಡೆಯದಿದ್ದ ವ್ಯಕ್ತಿಗಳು ಹಾಗೂ 25 ಕೋಟಿ ರೂಪಾಯಿ ವರೆಗಿನ ವ್ಯವಹಾರ ಇರುವವರು ಹಾಗೂ 2021ಮಾರ್ಚ್ 31ರ ವೇಳೆಗೆ ಸ್ಟಾ್ಯಂಡರ್ಡ್ ಎಂದು ವರ್ಗೀಕರಿಸಲಾದ ಸಾಲ ಗಳನ್ನು ಹೊಂದಿದವರು ಆರ್ಬಿಐನ ಹೊಸ ಮಾರಟೋರಿಯಂ ಯೋಜನೆಯಫಲಾನುಭವಿಗಳಾಗಲಿದ್ದಾರೆ. 2 ವರ್ಷಗಳ ವರೆಗೆ ಇದು ಅನ್ವಯವಾಗುತ್ತದೆ.
ಕೆವೈಸಿ ನಿಯಮ ಸಡಿಲ
ಕರೊನಾ ವೈರಸ್ ಎರಡನೇ ಅಲೆಯ ಕಾರಣ, ಆರ್ಬಿಐ, ಕೆವೈಸಿ (ನೋ ಯುವರ್ ಕಸ್ಟಮರ್) ನಿಯಮ ಜಾರಿಯನ್ನು ಸಡಿಲಗೊಳಿಸಿದೆ. ಈ ಸಂಬಂಧ ಬ್ಯಾಂಕ್ಗಳಿಗೆ ಸೂಚನೆ ನೀಡಿರುವ ಆರ್ಬಿಐ, ಡಿಸೆಂಬರ್ ಕೊನೆಯ ತನಕ ಕೆವೈಸಿ ಸಂಬಂಧ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಗ್ರಾಹಕರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸಬಾರದು ಎಂದು ನಿರ್ದೇಶನ ನೀಡಿದೆ. ಯಾವುದಾದರೂ ಎನ್ಫೋರ್ಸ್ವೆುಂಟ್ ಏಜೆನ್ಸಿ ಅಥವಾ ಕೋರ್ಟ್ ನಿರ್ದೇಶನದ ಹೊರತಾಗಿ ಗ್ರಾಹಕರ ಮೇಲೆ ಕೆವೈಸಿ ವಿಚಾರದಲ್ಲಿ ನಿರ್ಬಂಧ ಅಥವಾ ದಂಡನಾ ಕ್ರಮವನ್ನು ಬ್ಯಾಂಕುಗಳು ಅಥವಾ ಇತರೆ ರೆಗ್ಯುಲೇಟೆಡ್ ಎಂಟೈಟಿಗಳು ತೆಗೆದುಕೊಳ್ಳುವಂತಿಲ್ಲ. ಪ್ರೊಪೈಟರ್ಶಿಪ್ ಸಂಸ್ಥೆಗಳು, ಅಥೋರೈಸ್ಡ್ ಸಿಗ್ನಟರೀಸ್ ಮತ್ತು ಲೀಗಲ್ ಎಂಟೈಟಿಗಳ ಬೆನೆಫಿಶಿಯಲ್ ಓನರ್ಸ್ ಮುಂತಾದ ಗ್ರಾಹಕರ ಹೊಸ ವಿಭಾಗಕ್ಕಾಗಿ ವಿಡಿಯೋ ಕೆವೈಸಿ ಅಥವಾ ವಿ - ಸಿಐಪಿ ( ವಿಡಿಯೋ ಬೇಸ್ಡ್ ಕಸ್ಟಮರ್ ಐಡೆಂಟಿಫಿಕೇಶನ್ ಪ್ರೊಸಸ್) ಬಳಸುವ ಅವಕಾಶವನ್ನೂ ವಿಸ್ತರಿಸಲು ಆರ್ಬಿಐ ತೀರ್ವನಿಸಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆರೋಗ್ಯ ಪ್ಯಾಕೇಜ್ ಫಲಾನುಭವಿಗಳು
ವ್ಯಾಕ್ಸಿನ್ ತಯಾರಕರು, ವೈದ್ಯಕೀಯ ಉಪಕರಣಗಳ ಸರಬರಾಜುದಾರರು, ಆಸ್ಪತ್ರೆಗಳು ಮತ್ತು ಹಣದ ಅಗತ್ಯವಿರುವ ಕೋವಿಡ್ ರೋಗಿಗಳು 50,000 ಕೋಟಿ ರೂಪಾಯಿ ಮೊತ್ತದ ಆರೋಗ್ಯರಕ್ಷಣೆ ಪ್ಯಾಕೇಜ್ನ ಫಲಾನುಭವಿಗಳಾಗಲಿದ್ದಾರೆ. ಈ ಎಲ್ಲ ಸೌಲಭ್ಯ ಸಲಕರಣೆಗಳ ಲಭ್ಯತೆಗೆ ತುರ್ತಾಗಿ ಹಣಕಾಸಿನ ನೆರವನ್ನು ಒದಗಿಸಲಾಗುತ್ತದೆ. 2022ರ ಮಾರ್ಚ್ 31ರ ವರೆಗೆ ಬ್ಯಾಂಕ್ಗಳು ನೀಡಬಹುದಾದ ಸಾಲಗಳನ್ನು ಮೂರು ವರ್ಷಗಳಿಗೆ ಆದ್ಯತಾ ವಲಯದ ಸಾಲ ಅಥವಾ ಮರುಪಾವತಿ ಎಂದು ಪರಿಗಣಿಸಲಾಗುತ್ತದೆ. ಈ ಪೈಕಿ ಯಾವುದು ಮೊದಲೋ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಡಿಮೆ ಬಡ್ಡಿ ದರದೊಂದಿಗೆ ಈ ವರ್ಗೀಕರಣ ಮಾಡಲಾಗುತ್ತದೆ. ಆರ್ಥಿಕ ಮರುಹೊಂದಾಣಿಕೆ ಯೋಜನೆಯನ್ನು 90 ದಿನದೊಳಗೆ ಅನುಷ್ಠಾನಗೊಳಿಸಬೇಕಾಗುತ್ತದೆ ಎಂದು ಶಕ್ತಿಕಾಂತ ದಾಸ್ ವಿವರಿಸಿದ್ದಾರೆ.