

ಮುಂಬೈ: ಬಾಲಿವುಡ್ನಲ್ಲಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿರುವ ಹಾಗೂ ಆಗಾಗ ವಿವಾದಕ್ಕೆ ಈಡಾಗುತ್ತಲೇ ಇರುವ ನಟಿ ಕಂಗನಾ ರಣಾವತ್ ವಿರುದ್ಧ ಈಗ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಮುಂಬೈನ ಬಾಂದ್ರಾ ಮ್ಯಾಜಿಸ್ಟ್ರೇಟ್ ಮೆಟ್ರೋಪಾಲಿಟನ್ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಾಂದ್ರಾ ಠಾಣೆಯ ಪೊಲೀಸರು ನಟಿ ಕಂಗನಾ ರಣಾವತ್ ಹಾಗೂ ಆಕೆಯ ಸೋದರಿ ರಂಗೋಲಿ ಚಾಂಡೆಲ್ ವಿರುದ್ಧ 124ಎ ಸೇರಿ ವಿವಿಧ ಸೆಕ್ಷನ್ಗಳ ಅಡಿ ಎಫ್ಐಆರ್ ದಾಖಲಿಸಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ಇವರಿಬ್ಬರೂ ಸಮುದಾಯಗಳ ನಡುವೆ ಒಡಕು ಮೂಡಲು ಯತ್ನಿಸಿದ್ದಾರೆ ಎಂಬ ದೂರಿನ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ.
ಈ ಹಿಂದೆ ಏಪ್ರಿಲ್ನಲ್ಲಿ ಸಹೋದರಿ ರಂಗೋಲಿ ಚಾಂಡೆಲ್ ಹೇಳಿಕೆ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸಮಜಾಯಿಷಿ ಕೊಟ್ಟಿದ್ದ ನಟಿ ಕಂಗನಾ ವಿರುದ್ಧ ಮುಂಬೈನ ಅಂಬೂಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಇತ್ತೀಚೆಗೆ ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದ ವೇಳೆ ಟ್ವಿಟರ್ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಕಂಗನಾ ವಿರುದ್ಧ ತುಮಕೂರಿನ ಕ್ಯಾತಸಂದ್ರ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಬೆಂಗಳೂರು ಹೈಕೋರ್ಟ್ ವಕೀಲ ರಮೇಶ್ ನಾಯ್ಕ್ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಜೆಎಂಎಫ್ಸಿ ನ್ಯಾಯಾಲಯವು ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲು ಕೋರ್ಟ್ ಆದೇಶಿಸಿತ್ತು. (ಏಜೆನ್ಸೀಸ್)