

ಮುಂಬೈ: ನಟಿ ಕಂಗನಾ ರಣಾವತ್ ಮಾತುಗಳೆಲ್ಲ ಇತ್ತೀಚೆಗೆ ವಿವಾದಕ್ಕೀಡಾಗುತ್ತಿದ್ದು, ಅವರ ಮೇಲೆ ಹಲವೆಡೆ ದೂರುಗಳು ದಾಖಲವಾಗಿವೆ. ಇದೀಗ ಅವರ ವಿರುದ್ಧ ಕ್ರಿಮಿನಲ್ ದೂರೊಂದು ದಾಖಲಾಗಿದೆ.
ವಕೀಲ ಅಲಿ ಕಾಶಿಫ್ ಖಾನ್ ದೇಶ್ಮುಖ್ ಎಂಬುವವರು ಮುಂಬೈನ ಅಂಧೇರಿಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರಿಗೆ ದೂರು ನೀಡಿದ್ದು, ಕಂಗನಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಕೋರಿದ್ದಾರೆ.
ಕಂಗನಾ ಮತ್ತೆ ದುರುದ್ದೇಶಪೂರಿತವಾಗಿ ಟ್ವೀಟ್ ಮಾಡಿದ್ದು, ವಿವಿಧ ಧರ್ಮಗಳ ಜನರ ನಡುವೆ ದ್ವೇಷ ಕೆರಳಿಸುವಂತೆ ಮಾತನಾಡಿದ್ದಾರೆ. ಕಂಗನಾ ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಟ್ವಿಟರ್ನಲ್ಲಿ ಬೇಕಾಬಿಟ್ಟಿ ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ನ್ಯಾಯಾಂಗವನ್ನು ಪಪ್ಪುಸೇನಾ ಎಂದಿರುವ ಅವರು ನ್ಯಾಯಾಂಗ ನಿಂದನೆಯನ್ನೂ ಮಾಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಹಗೆತನದ ಮಾತನಾಡುವ ಸ್ವಾತಂತ್ರ್ಯವಲ್ಲ ಎಂದು ದೂರುದಾರರು ಹೇಳಿದ್ದಾರೆ.
ಕಂಗನಾ ವಿರುದ್ಧ ಈಗಾಗಲೇ ಮುಂಬೈನ ಬಾಂದ್ರಾ ಮೆಟ್ರೊಪಾಲಿಟನ್ ಕೋರ್ಟ್ನಲ್ಲಿ ಹಾಗೂ ತುಮಕೂರಿನ ಕೋರ್ಟ್ನಲ್ಲೂ ದೂರುಗಳು ದಾಖಲಾಗಿವೆ. (ಏಜೆನ್ಸೀಸ್)