

ಭದ್ರಾವತಿ: ನಗರದಲ್ಲಿ ಗುರುವಾರ ರಾತ್ರಿ ಗಣೇಶ್ ರೈಸ್‌ಮಿಲ್ ಬಾಯ್ಲರ್ ಸ್ಫೋಟ ಘಟನೆಯಲ್ಲಿ ನಾಪತ್ತೆಯಾಗಿದ್ದ ರಘುನಾಥ ರಾವ್ ಸಾಳಂಕೆ (48) ತಡರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ.
ಸ್ಫೋಟದ ರಭಸಕ್ಕೆ ಇಡೀ ಕಟ್ಟಡ ಕುಸಿದಿತ್ತು. ಬಾಯ್ಲರ್ ಆಪರೇಟಿಂಗ್ ಕೆಲಸ ಮಾಡುತ್ತಿದ್ದ ರಘುನಾಥ ರಾವ್ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಠಾಣೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸತತ 6 ತಾಸು ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದಾರೆ. ಬಾಯ್ಲರ್ ಸ್ಫೋಟದ ಕಾವಿನಿಂದ ಶವ ಅರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರಘುನಾಥ ರಾವ್ ಸಾಳಂಕೆ ತಾಲೂಕಿನ ದೇವರಹಳ್ಳಿಯ ಕೋಟೆಹಾಳ್ ಗ್ರಾಮದ ನಿವಾಸಿ. ಇವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಕಳೆದ 20 ವರ್ಷಗಳಿಂದಲೂ ಗಣೇಶ್ ರೈಸ್‌ಮಿಲ್‌ನಲ್ಲಿ ಬಾಯ್ಲರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜೀವನ ನಿರ್ವಹಣೆಗೆ ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು. ಇವರಿಗೆ ಸಾಕಷ್ಟು ಅನುಭವವೂ ಇತ್ತು ಎನ್ನಲಾಗಿದೆ. ಬಾಯ್ಲರ್ ಓವರ್‌ಹೀಟ್ ಆಗಿರುವುದೇ ಸ್ಪೋಟಕ್ಕೆ ಕಾರಣ ಎನ್ನಲಾಗಿದೆ. ಇದು ರೈಸ್‌ಮಿಲ್ ಮಾಲೀಕರ ನಿರ್ಲಕ್ಷೃವೋ ಅಥವಾ ಕಾರ್ಮಿಕರದೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಶವವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿತ್ತು. ಸ್ಥಳದಲ್ಲಿದ್ದ ಕುಟುಂಬ ಸದಸ್ಯರ ಗೋಳು ಮುಗಿಲು ಮುಟ್ಟಿತ್ತು. ಕುಟುಂಬಕ್ಕೆ ಆಸರೆಯಾಗಿದ್ದ ಜೀವವನ್ನು ಕಳೆದುಕೊಂಡ ಕುಟುಂಬ ಅನಾಥರಂತೆ ಆಸ್ಪತ್ರೆ ಎದುರು ಬೀಡುಬಿಟ್ಟಿತ್ತು. ಘಟನೆಯಲ್ಲಿ ಗಾಯಗೊಂಡಿದ್ದ 7 ಜನರ ಪೈಕಿ ಮೂವರು ಡಿಸ್ಚಾರ್ಜ್ ಆಗಿದ್ದು, ಉಳಿದವರು ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರ್‌ಸಿಸಿ ಒಳಹೊಕ್ಕ ಕಬ್ಬಿಣದ ತುಂಡು: ಸ್ಫೋಟಗೊಂಡ ಬಾಯ್ಲರ್‌ನ ಕಬ್ಬಿಣದ ಬಿಡಿಭಾಗವೊಂದು 1 ಕಿ.ಮೀ ದೂರವಿರುವ ಇಂದಿರಾನಗರದ ಮನೆಯೊಂದರ ಮೇಲೆ ಬಿದ್ದಿದೆ. ಈ ಬಿಡಿಭಾಗ ಮನೆಯ ಆರ್‌ಸಿಸಿಯೊಳಗಿಂದ ಹೊಕ್ಕು ಬೆಡ್‌ರೂಂ ಭಾಗದಲ್ಲಿ ನಿಂತಿದೆ. ರಾಕೆಟ್‌ನಂತೆ ಹೊಕ್ಕಿರುವ ಈ ಕಬ್ಬಿಣದ ತುಣುಕು 15 ಅಡಿ ಎತ್ತರವಿದೆ. ಈ ಸಂದರ್ಭದಲ್ಲಿ ಮನೆ ಮಾಲೀಕ, ಎಂಪಿಎಂ ನಿವೃತ್ತ ನೌಕರ ಮಹಮದ್ ಇಕ್ಬಾಲ್ ಪ್ರಾರ್ಥನೆಗೆಂದು ಮಸೀದಿಗೆ ತೆರಳಿದ್ದರೆ, ಪತ್ನಿ ನಸೀಂ ಉನ್ನೀಸಾ ಬೆಂಗಳೂರಿನ ಮಗಳ ಮನೆಗೆ ಹೋಗಿದ್ದರು. ಪ್ರಾರ್ಥನೆಯಿಂದ ಹೊರಬಂದ ಇಕ್ಬಾಲ್‌ಗೆ ಮನೆಯ ಹತ್ತಿರದವರು ಸುದ್ದಿ ಮುಟ್ಟಿಸಿದ್ದಾರೆ. ಮನೆಯ ಛಾವಣಿ ಬಹುತೇಕ ನಷ್ಟವಾಗಿದ್ದು, ನಷ್ಟ ಭರಿಸುವವರು ಯಾರು ಎಂಬ ಗೊಂದಲದಲ್ಲಿ ಮಹಮದ್ ಇಕ್ಬಾಲ್ ಇದ್ದಾರೆ.
ಬಾಂಬ್ ಬ್ಲಾಸ್ಟ್ ಅನುಭವ: ರೈಸ್‌ಮಿಲ್ ಎದುರಲ್ಲಿರುವ ಜಿಪಂ ಮಾಜಿ ಉಪಾಧ್ಯಕ್ಷ ಶಿವಾಜಿರಾವ್ ಸಿಂಧ್ಯಾ ಅವರ ಮನೆಯ ಎಲ್ಲ ಕಿಟಕಿಗಳ ಗಾಜುಗಳು ಪುಡಿಪುಡಿಯಾಗಿವೆ. ಬಾಯ್ಲರ್ ಸ್ಫೋಟದ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸಂಪೂರ್ಣ ದಾಖಲಾಗಿದೆ. ಸ್ಫೋಟದ ಸಮಯದ ಕೆಲವೇ ನಿಮಿಷಗಳ ಅಂತರದಲ್ಲಿ ಗ್ಯಾಸ್ ಲಾರಿಯೊಂದು ಅದೇ ಮಾರ್ಗದಲ್ಲಿ ಸಾಗಿದೆ. ಕಾರೊಂದು ಅದೇ ಸಮಯಕ್ಕೆ ಬಂದಿದ್ದು, ಕಾಂಪೌಂಡ್‌ನಿಂದ ಹಾರಿ ಬಂದ ಇಟ್ಟಿಗೆ ಚೂರುಗಳು ಕಾರಿನ ಮುಂಭಾಗ ಬಡಿದಿವೆ. ಪಕ್ಕದ ಇಂಡಿಯನ್ ಸೆರಾಮಿಕ್ ಹೌಸ್ ಸಂಪೂರ್ಣ ಹಾಳಾಗಿದೆ. ಗ್ಯಾರೇಜ್ ಅಂಗಡಿಯ ಶಫೀವುಲ್ಲಾ ಗಾಯಗೊಂಡಿದ್ದಾರೆ. ಸ್ಫೋಟದ ಶಬ್ದಕ್ಕೆ ಹೆದರಿದ ಹೊಸಮನೆ ಹಾಗೂ ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಮನೆಯ ಹೊರಗೆ ಓಡಿ ಬಂದಿದ್ದಾರೆ. ಇಡೀ ಬಡಾವಣೆ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತವಾಗಿ ದಟ್ಟ ಹೊಗೆ ಆವರಿಸಿತ್ತು.