ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್‌ಗಳ ನಡುವೆ ಡಿಕ್ಕಿ; ಓರ್ವ ಪ್ರಯಾಣಿಕ ಮೃತ.. ನಾಲ್ವರಿಗೆ ಗಾಯ | Jet Collide

Untitled design (13)
Published on

ವಾಷಿಂಗ್ಟನ್​ ಡಿಸಿ: ಅಮೆರಿಕದಲ್ಲಿ ಮತ್ತೊಮ್ಮೆ ವಿಮಾನ ಅಪಘಾತ ಸಂಭವಿಸಿದೆ. ಅರಿಜೋನಾದ ಸ್ಕಾಟ್ಸ್‌ಡೇಲ್ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್‌ಗಳ ನಡುವೆ ಪರಸ್ಪರ ಡಿಕ್ಕಿ(Jet Collide) ಆಗಿರುವ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಒಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ

ಸ್ಕಾಟ್ಸ್‌ಡೇಲ್ ವಿಮಾನ ನಿಲ್ದಾಣದ ವಾಯುಯಾನ ಇಲಾಖೆ ಮತ್ತು ಔಟ್ರೀಚ್ ಸಂಯೋಜಕರಾದ ಕೆಲ್ಲಿ ಕ್ಯೂಸ್ಟರ್ ಅವರ ಪ್ರಕಾರ, ಖಾಸಗಿ ಪ್ರದೇಶದಲ್ಲಿ ಜೆಟ್​ ಅನ್ನು ಲ್ಯಾಂಡಿಂಗ್​ ಮಾಡುವಾಗ ಮತ್ತೊಂದು ಜೆಟ್​ಗೆ ಡಿಕ್ಕಿ ಹೊಡೆದಿದೆ. ಲ್ಯಾಂಡಿಂಗ್ ಸಮಯದಲ್ಲಿ ಒಂದು ಜೆಟ್ ರನ್‌ವೇಯಿಂದ ಹೊರಟು ನಿಂತಿದ್ದ ಗಲ್ಫ್‌ಸ್ಟ್ರೀಮ್ 200 ಜೆಟ್‌ಗೆ ಡಿಕ್ಕಿ ಹೊಡೆದಿದೆ ಎಂದಿದ್ದಾರೆ. ಪ್ರಾಥಮಿಕ ತನಿಖೆಗಳ ಪ್ರಕಾರ ಒಳಬರುವ ಜೆಟ್‌ನ ಲ್ಯಾಂಡಿಂಗ್ ಗೇರ್ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅನುಮಾನವನ್ನು ಹುಟ್ಟುಹಾಕಿವೆ. ಇದರಿಂದಾಗಿ ಈ ಡಿಕ್ಕಿ ಸಂಭವಿಸಿದೆ ಎಂದು ಹೇಳಲಾಗಿದೆ.

ಸ್ಕಾಟ್ಸ್‌ಡೇಲ್ ಅಗ್ನಿಶಾಮಕ ಇಲಾಖೆಯ ಕ್ಯಾಪ್ಟನ್ ಡೇವ್ ಫೋಲಿಯೊ ಅವರು, ಗಾಯಾಳುಗಳಲ್ಲಿ ಇಬ್ಬರನ್ನು ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿದೆ ಮತ್ತು ಒಬ್ಬರ ಸ್ಥಿತಿ ಸ್ಥಿರವಾಗಿದೆ. ಈ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ದೇಹವನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಅಮೆರಿಕವು ಕಳೆದ ಎರಡು ವಾರಗಳಲ್ಲಿ ಮೂರು ಪ್ರಮುಖ ವಿಮಾನ ಅಪಘಾತಗಳನ್ನು ಕಂಡಿರುವ ಸಮಯದಲ್ಲಿ ಸ್ಕಾಟ್ಸ್‌ಡೇಲ್ ಡಿಕ್ಕಿ ಸಂಭವಿಸಿದೆ. ಜನವರಿ 29 ರಂದು ರಾಷ್ಟ್ರದ ರಾಜಧಾನಿಯ ಬಳಿ ವಾಣಿಜ್ಯ ಜೆಟ್ ಲೈನರ್ ಮತ್ತು ಮಿಲಿಟರಿ ಹೆಲಿಕಾಪ್ಟರ್ ಡಿಕ್ಕಿ ಹೊಡೆದು 67 ಜನರು ಮೃತಪಟ್ಟಿದ್ದರು. ನಂತರ ಜನವರಿ 31 ರಂದು ಫಿಲಡೆಲ್ಫಿಯಾದಲ್ಲಿ ವೈದ್ಯಕೀಯ ಸಾರಿಗೆ ವಿಮಾನವೊಂದು ಪತನಗೊಂಡು ವಿಮಾನದಲ್ಲಿದ್ದ ಆರು ಜನರು ಮತ್ತು ನೆಲದ ಮೇಲೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದರು. ಅದೇ ಸಮಯದಲ್ಲಿ ಕಳೆದ ವಾರ ಪಶ್ಚಿಮ ಅಲಾಸ್ಕಾದಲ್ಲಿ ಸಣ್ಣ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಎಲ್ಲಾ 10 ಜನರು ಮೃತಪಟ್ಟಿದ್ದರು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net